ನಾಳೆ ಬೆಂಗಳೂರಿನಲ್ಲಿ `ದಲಿತರ ಸಾಂಸ್ಕøತಿಕ ಪ್ರತಿರೋಧ’ ಕಾರ್ಯಕ್ರಮ : ಮೈಸೂರಿನಿಂದ 10 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ
ಡಿಸೆಂಬರ್ 05, 2022
-ನಜೀರ್ ಅಹಮದ್, ಪಾಂಡವಪುರ
ಮೈಸೂರು : ಡಾ.ಬಿ.ಆರ್. ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನದ ಅಂಗವಾರಿ ನಾಳೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ `ದಲಿತರ ಸಾಂಸ್ಕøತಿಕ ಪ್ರತಿರೋಧ’ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶಕ್ಕೆ ತೆರಳಲು ಜಿಲ್ಲೆಯಲ್ಲಿ ದಲಿತರ ದಂಡು ಸಿದ್ಧವಾಗಿದ್ದು, ಮೈಸೂರು ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶ ಮಾಡುತ್ತಿರುವ ಆರ್‍ಎಸ್‍ಎಸ್, ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ದೊಡ್ಡಮಟ್ಟದ ಹೋರಾಟ ನಡೆಸಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ತಿಳಿಸಿದ್ದಾರೆ. ನಾಳೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ದಲಿತರ ಸಮಾವೇಶ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‍ನಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಬೃಹತ್ ಮೆರವಣಿಗೆ ತೆರಳಿದೆ. ಈಗಾಗಲೇ ದಲಿತರ ಸಾಂಸ್ಕøತಿಕ ಪ್ರತಿರೋಧ ವ್ಯಕ್ತವಾಗುತ್ತಿದ್ದು, ದಲಿತ ಸಂಘರ್ಷ ಸಮಿತಿಯ ಎಲ್ಲಾ ಬಣಗಳು ಒಟ್ಟಾಗಿ ಈ ಕಾರ್ಯಕ್ರಮ ರೂಪಿಸಿಸಿರುವುದು ದಲಿತರ ಶಕ್ತಿಗೆ ಮತ್ತಷ್ಟು ಬಲ ಬಂದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದಲೂ ದಸಂಸ ಬಣಗಳು ಈ ಸಮಾವೇಶದ ಯಶಸ್ಸಿಗೆ ಟೊಂಕ ಕಟ್ಟಿ ಸಂಘಟನೆ ಮಾಡುತ್ತಿದ್ದು, ದಸಂಸ ಮುಖಂಡರುಗಳಾದ ಇಂಧೂಧರ ಹೊನ್ನಾಪುರ, ಡಿ.ಜಿ.ಸಾಗರ್, ಗುರುಪ್ರಸಾದ್ ಕೆರಗೂಡು, ವಿ.ನಾಗರಾಜು, ಲಕ್ಷ್ಮಿನಾರಾಯಣ ನಾಗವಾರ, ಎನ್.ವೆಂಕಟೇಶ್ ರವರುಗಳು ಮೈಸೂರು ಜಿಲ್ಲೆಗೆ ಆಗಮಿಸಿ ದಲಿತ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡಿ ಹೋಗಿದ್ದಾರೆ. ಜಿಲ್ಲೆಯ ದಸಂಸ ಮುಖಂಡರುಗಳು ಪ್ರತಿ ಹಳ್ಳಿ ಹಳ್ಳಿ, ತಾಲ್ಲೂಕು, ಹೋಬಳಿಗಳಿಗೆ ತೆರಳಿ ದಲಿತರ ಸಾಂಸ್ಕøತಿಕ ಪ್ರತಿರೋಧಕ್ಕೆ ಬೆಂಬಲ ಕೋರಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶಕ್ಕೆ ಆಗಮಿಸುವಂತೆ ಮನವಿ ಮಾಡಿ, ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಆರ್‍ಎಸ್‍ಎಸ್ ದಲಿತರ ಮೇಲೆ ನಡೆಸುತ್ತಿರುವ ಶೋಷಣೆ, ದಬ್ಬಾಳಿಕೆ, ದೌರ್ಜನ್ಯದ ವಿಚಾರ ಕುರಿತು ಮನವರಿಕೆ ಮಾಡಿಕೊಟ್ಟು ಸಂಘಟನೆಯಲ್ಲಿ ತೊಡಗಿದ್ದೇವೆ ಎಂದು ಆಲಗೂಡು ಶಿವಕುಮಾರ್ ವಿವರಣೆ ನೀಡಿದರು. ದಸಂಸ 6 ಬಣಗಳ ಮುಖಂಡರುಗಳು ಪದಾಧಿಕಾರಿಗಳು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿಕೊಂಡು ಪ್ರತಿ ಗ್ರಾಮಗಳ ದಲಿತರ ಬೀದಿಗಳಲ್ಲಿ, ಅಂಬೇಡ್ಕರ್ ಸಂಘಗಳು, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು, ದಲಿತ ಸಮುದಾಯದ ಯಜಮಾನರುಗಳನ್ನು ಭೇಟಿ ಮಾಡಿ ಐಕ್ಯತಾ ಸಮಾವೇಶ ಯಶಸ್ವಿಗೊಳಿಸಲು ಕೈ ಜೋಡಿಸುವಂತೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಮೈಸೂರು ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ನಂಜನಗೂಡು ತಾಲ್ಲೂಕಿನಿಂದ 50, ಕೆ.ಆರ್.ನಗರದಿಂದ 20, ಟಿ.ನರಸೀಪುರದಿಂದ 45, ಎಚ್.ಡಿ.ಕೋಟೆ 40, ಪಿರಿಯಾಪಟ್ಟಣ 30, ಹುಣಸೂರು 40, ಮೈಸೂರು ತಾಲ್ಲೂಕು 15, ಮೈಸೂರು ನಗರದಿಂದ 10 ಬಸ್‍ಗಳಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರುಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ತೆರಳಲು ಸಿದ್ಧತೆ ನಡೆದಿದೆ. ಇನ್ನೂ ಅನೇಕ ಜನರು ಸ್ಕೂಟರ್, ಕಾರು, ಟೆಂಪೊಗಳಲ್ಲಿ ತೆರಳಲು ಸಿದ್ಧರಾಗಿದ್ದು, ಜಿಲ್ಲೆಯಾದ್ಯಂತ 10 ಸಾವಿರಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ತೆರಳಲಿದ್ದೇವೆ ಆಲಗೊಡು ಶಿವಕುಮಾರ್ ಮೈಸೂರು ದಿಗಂತ ಪತ್ರಿಕೆಗೆ ತಿಳಿಸಿದರು. ಡಿ.6 ರಂದು ಬೆಳಿಗ್ಗೆ 5.30 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಕಾರ್ಯಕರ್ತರು ಸಿದ್ಧರಾಗಬೇಕು. ಆಯಾ ಸ್ಥಳದಲ್ಲಿನ ಅಂಬೇಡ್ಕರ್ ಭಾವಚಿತ್ರ ಅಥವಾ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರು ಹೊರಡಬೇಕು. ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಊಟ ಬೆಂಗಳೂರಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರು ನೀಲಿ ಬಣ್ಣದ ಟೀ ಶರ್ಟ್ ಧರಿಸಿ, ನೀಲಿ ಬಣ್ಣದ ಶಾಲು, ಬಾವುಟಗಳನ್ನು ಹಿಡಿದು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು. `ಬೆಂಗಳೂರಿನಲ್ಲಿ ನಡೆಯುತ್ತಿರುವ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶಕ್ಕೆ ದಲಿತರೆ ಸ್ವಯಂ ಪ್ರೇರಿತರಾಗಿ ತಮ್ಮ ಖರ್ಚಿನಲ್ಲೇ ವಿವಿಧ ವಾಹನಗಳ ಮೂಲಕ ಆಗಮಿಸುತ್ತಿದ್ದಾರೆ. ಇಲ್ಲಿ ಯಾವ ರಾಜಕೀಯ ಪಕ್ಷದ ಮುಖಂಡರುಗಳು ಭಾಗವಹಿಸುವುದಿಲ್ಲ, ದಲಿತರ ಸ್ವಾಭಿಮಾನ ಮತ್ತು ಸಮಾಜದ ಹಿತ ದೃಷ್ಟಿಯಿಂದ ಈ ಸಮಾವೇಶಕ್ಕೆ ಜನಸಾಗರವೇ ಹರಿದುಬರುತ್ತಿದೆ.' -ಚುಂಚನಹಳ್ಳಿ ಮಲ್ಲೇಶ್, ಜಿಲ್ಲಾ ಸಂಚಾಲಕ, ದಸಂಸ, ಮೈಸೂರು.
0 ಕಾಮೆಂಟ್‌ಗಳು