ವಿಷ ಪ್ರಸಾದದಿಂದ 17 ಜನ ಪ್ರಾಣಬಿಟ್ಟ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ದುರಂತಕ್ಕೆ ನಾಲ್ಕು ವರ್ಷ

ಶಾರುಕ್ ಖಾನ್, ಹನೂರು

ಹನೂರು: ತಾಲೂಕಿನ ಸುಳ್ವಾಡಿ ಗ್ರಾಮದ ಹೊರವಲಯದಲ್ಲಿರುವ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ದುರಂತ ನಡೆದು ಇಂದಿಗೆ ನಾಲ್ಕು ವರ್ಷಗಳಾಗಿದೆ.
ದೇವಿಯ ದರ್ಶನಕ್ಕೆ ಬಂದು ಪ್ರಸಾದ ಸ್ವೀಕರಿಸಿ ಪ್ರಾಣ ಬಿಟ್ಟವರು 17 ಜನ, ಜತೆಗೆ 129 ಮಂದಿ ಅಸ್ವಸ್ಥಗೊಂಡು ಇಂದಿಗೂ ಒಂದಲ್ಲಾ ಒಂದು ನೋವಿನಿಂದ ನರಳುತ್ತಿದ್ದಾರೆ.
2018ರ ಡಿಸೆಂಬರ್ 14ನೇ ತಾರೀಕು ಮೃತರಾದ 17 ಜನ ನತದೃಷ್ಟರಿಗೆ  ಕರಾಳ ದಿನವಾಗಿತ್ತು. ಇಂದಿಗೂ ಆ ದುರಂತದ ನೆನಪು ಎಲ್ಲರ ಮನದಲ್ಲೂ ಕಹಿಯಾಗಿ ಉಳಿದಿದೆ. ಯಾರದೋ ಕಿಚ್ಚಿಗೆ ಬಲಿಯಾದ ಅಮಾಯಕ ಜೀವಗಳು ನಮ್ಮ ಕಣ್ಣ ಮುಂದೆ ಬರುತ್ತಿವೆ.  
ಪ್ರಸಾದಕ್ಕೆ ವಿಷ ಬೆರೆಸುವ ಹಿಂದಿನ ಕರಾಳ ಉದ್ದೇಶದವನ್ನು ಮೆಲುಕು ಹಾಕಿದಾಗ, ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಜನಪ್ರಿಯತೆಯೂ ಪ್ರಸಾದಕ್ಕೆ ವಿಷ ಬೆರೆಸಲು ಕಾರಣವಾಗಿತ್ತು.
ಕಿಚ್ಚುಗುತ್ತಿ ಮಾರಮ್ಮನ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟ್ರಸ್ಟ್ ರಚನೆಯಾಯಿತು. ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಬೃಹನ್ಮಠದ ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವ ಸ್ವಾಮೀಜಿಯನ್ನು  ಟ್ರಸ್ಟ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಉಳಿದಂತೆ ಏಳೆಂಟು ಮಂದಿ ಟ್ರಸ್ಟಿಗಳಿದ್ದರು. ಇದೆಲ್ಲದರ ನಡುವೆ ಟ್ರಸ್ಟ್‍ನ ಮ್ಯಾನೇಜರ್ ಪತ್ನಿ ಅಂಬಿಕಾಗೂ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿಗೂ ನಂಟು ಇದ್ದಿದ್ದರಿಂದಾಗಿ ಆಕೆಯೇ ಟ್ರಸ್ಟ್‍ನ ಅಧ್ಯಕ್ಷಳಂತೆ ವರ್ತಿಸಲು ಶುರು ಮಾಡಿದ್ದಳು. ದಿನಕಳೆದಂತೆ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಆಡಳಿತದ ಅಧಿಕಾರ ಹಿಡಿಯಲು ಹಾತೊರೆಯುತ್ತಿದ್ದಳು. ಇದಕ್ಕೆ ಬೆಂಗಾವಲಾಗಿ ನಿಂತಿದ್ದು ಇಮ್ಮಡಿ ಮಹದೇವ ಸ್ವಾಮೀಜಿ.
ದುರಂತದ ಕ್ಷಣ ಬಂದೇಬಿಟ್ಟಿತು  
ಪ್ರಸಾದಕ್ಕೆ ವಿಷ ಬೆರೆಸಿ ಒಂದಷ್ಟು ಮಂದಿಗೆ ಆರೋಗ್ಯ ಏರುಪೇರಾಗಿ ದೇವಸ್ಥಾನದ ಟ್ರಸ್ಟ್‍ಗೆ ಕೆಟ್ಟ ಹೆಸರು ತರಬೇಕೆಂಬುದು ಅಂಬಿಕಾ  ಇರಾದೆಯಾಗಿತ್ತು. 
ಹೀಗಾಗಿಯೇ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಸಿ ಭಕ್ತರಿಗೆ ಹಂಚಿದ್ದಳು.  ನೋಡ, ನೋಡುತ್ತಿದ್ದಂತೆ ಘನಘೋರ ವಿಷಕ್ಕೆ ಪ್ರಸಾದ ಸೇವಿಸಿದ ಭಕ್ತರು ವಿಲ ವಿಲ ಒದ್ದಾಡಿದರು. ಪ್ರಸಾದ ಸೇವಿಸಿದ ನೂರಾರು ಮಂದಿ ಅಸ್ವಸ್ಥಗೊಂಡರು. ಎಲ್ಲರನ್ನೂ ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಯಿತು. ಅಂದು ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಿಂದಲೇ ಅಸ್ವಸ್ಥರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಘೋಷಿಸಿ. ಮೇಲುಕೋಟೆ ಕ್ಷೇತದ ಶಾಸಕ, ಸಣ್ಣ ನೀರಾವರಿ ಸಚಿವರೂ ಆಗಿದ್ದ ಸಿ.ಎಸ್.ಪುಟ್ಟರಾಜು ಅವರನ್ನು ಉಸ್ತುವಾರಿಗೆ ನೇಮಿಸಿದರು.
ಉತೃಷ್ಟ ಚಿಕಿತ್ಸೆ ನೀಡಿದರೂ ಬರೋಬ್ಬರಿ 17 ಮಂದಿ ಅಮಾಯಕರು ಪ್ರಾಣ ಬಿಟ್ಟರು. 129 ಮಂದಿ ಪ್ರಾಣಾಪಾಯದಿಂದ ಪಾರಾದರೂ ಇಂದಿಗೂ ಒಂದಲ್ಲ ಒಂದು ತೊಂದರೆಯಿಂದ ಬಳಲುತ್ತಿದ್ದಾರೆ. ದೇವಾಲಯದ ಸುತ್ತಲಿನ ಗ್ರಾಮಗಳಾದ ಬಿದರಳ್ಳಿ, ಮಾರ್ಟಳ್ಳಿ, ಸುಳ್ವಾಡಿ, ಎಂ.ಜಿ.ದೊಡ್ಡಿ ಹೀಗೆ ಹಲವು ಗ್ರಾಮಗಳ ಜನ ಆ ದುರಂತದ ಕ್ಷಣಗಳನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಿದ್ದಾರೆ.

ಹಿರಿಯ ಮುಖಂಡ ಪೆದ್ದನಪಾಳ್ಯ ಮಣಿ ನೇತೃತ್ವದಲ್ಲಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದದಿಂದ ಮೃತಪಟ್ಟವರಿಗೆ ಇಂದು ಸಂತಾಪ ಸೂಚಿಸಲಾಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು