ಶಾಲಾ, ಕಾಲೇಜಿಗೆ ತೆರಳಲು ನಿಗದಿತ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯ
-ನಜೀರ್ ಅಹಮದ್, ಪಾಂಡವಪುರ
ಪಾಂಡವಪುರ: ಶಾಲಾ ಕಾಲೇಜುಗಳಿಗೆ ತೆರಳಲು ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ತಾಲ್ಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಚಾಮರಾಜನಗರ-ಬೀದರ್ ರಾಷ್ಟ್ರಿಯ ಹೆದ್ದಾರಿಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ತಡೆದು ಪ್ರತಿಭಟನೆ ನಡೆಸಿ, ಸಾರಿಗೆ ಸಚಿವರ ವಿರುದ್ಧ ಘೋಷಣೆ ಕೂಗಿದರು.
ತಾಲ್ಲೂಕು ಕೇಂದ್ರವಾದ ಪಾಂಡವಪುರಕ್ಕೆ ತೆರಳಲು ಟಿಎಸ್ ಛತ್ರ, ನೀಲನಹಳ್ಳಿ, ಅತ್ತಿಗನಹಳ್ಳಿ, ಕೊಡಗಳ್ಳಿ ಮುಂತಾದ ಗ್ರಾಮಗಳಿಂದ ನಡೆದುಕೊಂಡು ಮಹದೇಶ್ವರಪುರ ಗ್ರಾಮಕ್ಕೆ ಬರುವ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿಂದ ಸಾರಿಗೆ ಸಂಸ್ಥೆಯ ಬಸ್ ಮೂಲಕ ಪಾಂಡವಪುರಕ್ಕೆ ಬರುತ್ತಾರೆ. ಆದರೆ, ಸೂಕ್ತ ಸಮಯಕ್ಕೆ ಬಸ್ ಬಾರದ ಕಾರಣ ಶಾಲಾ ಕಾಲೇಜುಗಳಿಗೆ ತೆರಳಲು ತಡವಾಗುತ್ತದೆ. ಇದರಿಂದ ನಮಗೆ ಪಾಠ ಪ್ರವಚನಗಳು ತಪ್ಪಿಹೋಗುತ್ತವೆ. ಈ ಸಮಸ್ಯೆ ದಿನ ನಿತ್ಯವೂ ಆಗುತ್ತಿರುವ ಕಾರಣ ಶಾಲೆಗೆ ತಡವಾಗಿ ಬರುವ ನಮ್ಮನ್ನು ಶಿಕ್ಷಕರೂ ನಿಂದಿಸುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಈ ಭಾಗದ ಬಹುತೇಕ ರೈತಾಪಿ ಕುಟುಂಬದ ಮಕ್ಕಳು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಶಾಲಾ ಕಾಲೇಜುಗಳಿಗೆ ಹೋಗಲು ಯಾವುದೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲು ಅಸಾಧ್ಯವಾಗಿದೆ. ಸಾರಿಗೆ ಸಂಸ್ಥೆಯ ಬಸ್‍ಗಳನ್ನೆ ನಂಬಿ ಈ ಭಾಗದ ಮಕ್ಕಳು ತಮ್ಮ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಈ ಹಿಂದೆ ನಮ್ಮ ಗ್ರಾಮಕ್ಕೆ 2 ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೀಗ 2 ಬಸ್ ಇದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಕಲೆಕ್ಷನ್ ಆಗುವುದಿಲ್ಲ. ಬಸ್‍ಪಾಸ್ ಇರುವ ಮಕ್ಕಳನ್ನೆ ತುಂಬಿಕೊಂಡು ಬರಬೇಕಾಗುತ್ತದೆ ಎಂದು ಚಾಲಕರು ಮತ್ತು ನಿರ್ವಾಹಕರು ಮಕ್ಕಳು ಬರುವ ಮುನ್ನವೇ ಬಸ್ ತರುವುದು ಅಥವಾ ಮಕ್ಕಳು ಖಾಲಿಯಾದ ನಂತರ ಬಸ್ ತರುವುದು ಮಾಡುತ್ತಾರೆ ಇವರ ನಿರ್ಲಕ್ಷ್ಯದಿಂದ ನಮ್ಮ ಮಕ್ಕಳ ಶಿಕ್ಷಣ ಹಾಳಾಗುತ್ತಿದೆ ಎಂದು ಪೋಷಕರು ದೂರಿದರು.
ವಿಷಯ ತಿಳಿದ ಡಿಪೋ ಮ್ಯಾನೇಜರ್ ರೆಡ್ಡಿ ಅವರು, ತಕ್ಷಣ ಡಿಪೋದಿಂದ ಬಸ್ ಕಳಿಸಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಅನುಕೂಲ ಮಾಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಟಿ.ಎಸ್.ಛತ್ರ ಗ್ರಾಮದಲ್ಲೂ ಪ್ರತಿಭಟನೆ : ಸೂಕ್ತ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ಟಿ.ಎಸ್.ಛತ್ರ ಗ್ರಾಮದ ಬಳಿಯೂ ಚಾಮರಾಜನಗರ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳನ್ನು ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಈ ವೇಳೆ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನಿಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
8.20ಕ್ಕೆ ಬಸ್ ಬರಬೇಕು
ಈ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತೆರಳುವ ಮಕ್ಕಳು 8 ಗಂಟೆಗೆ ಮನೆ ಬಿಟ್ಟರೆ, 8.15ಕ್ಕೆ ಮಹದೇಶ್ವರಪುರ ಸರ್ಕಲ್‍ಗೆ ಬರುತ್ತಾರೆ ನಮಗೆ 8.20ಕ್ಕೆ ಇಲ್ಲಿ ಬಸ್‍ಗಳು ಬಂದರೆ ಅನುಕೂಲ. ಮತ್ತು 9.20ಕ್ಕೆ ಒಂದು ಬಸ್ ಬಂದರೆ ಎಲ್ಲರಿಗೂ ಅನುಕೂಲವಾಗುತ್ತದೆ.
-ಗೋಪಾಲ್, ಪೋಷಕರು
ನಿಗದಿತ ಸಮಯಕ್ಕೆ ಬಸ್ ಕಳಿಸುತ್ತೇವೆ
ವಿದ್ಯಾರ್ಥಿಗಳ ಸಲಹೆ ಮೇರೆಗೆ ಬೆಳಿಗ್ಗೆ 8 ಗಂಟೆಗೆ ಮಹದೇಶ್ವರಪುರಕ್ಕೆ ಬಸ್ ಕಳಿಸಲಾಗುತ್ತಿತ್ತು. ಆ ಸಮಯಕ್ಕೆ ವಿದ್ಯಾರ್ಥಿಗಳು ಬರುತ್ತಿಲ್ಲ. ಬಸ್ ಬಂದು ಹೋದ ನಂತರ ಮತ್ತೆ ಬಸ್ ಬೇಕೆಂದು ಫೋನ್ ಮಾಡುತ್ತಾರೆ. ಆ ಸಮಯದಲ್ಲಿ ಬಸ್ ಬೇರೆ ರೂಟ್ ಹೋಗಿರುತ್ತದೆ. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಅನುಕೂಲವಾಗು ರೀತಿ ಬಸ್ ವ್ಯವಸ್ಥೆ ಮಾಡುತ್ತೇವೆ.
-ರೆಡ್ಡಿ, ಡಿಪೋ ಮ್ಯಾನೇಜರ್, ಪಾಂಡವಪುರ.
0 ಕಾಮೆಂಟ್‌ಗಳು