ಹಣದ ವಿಷಯದಲ್ಲಿ ತಗಾದೆ : ಗಂಗೆ ಮುಟ್ಟಿ ಪ್ರಮಾಣ ಮಾಡಲು ಹೋದ ಇಬ್ಬರು ಯುವಕರು ನೀರು ಪಾಲು
ನವೆಂಬರ್ 05, 2022
ಹಾಸನ : ಹಣಕಾಸು ವ್ಯವಹಾರದಲ್ಲಿ ಇಬ್ಬರು ಯುವಕರ ನಡುವೆ ತಗಾದೆ ಉಂಟಾಗಿ ನೀರು ಮುಟ್ಟಿ ಆಣೆ ಪ್ರಮಾಣ ಮಾಡಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ತೇಜೂರು ಬಳಿ ನಡೆದಿದೆ. ತೇಜೂರು ಗ್ರಾಮದ ಚಂದ್ರು (35) ಮತ್ತು ಆನಂದ್ (30) ಮೃತ ಯುವಕರು. ಇಬ್ಬರೂ ಅಡುಗೆ ಕೆಲಸ ಮಾಡಿಕೊಂಡಿದ್ದರು. ಸಿಹಿ ತಿಂಡಿ ತಯಾರಿಸುವ ಕೆಲಸಕ್ಕೆ ಅಡುಗೆ ಗುತ್ತಿಗೆದಾರರಿಂದ ಪಡೆದ ಹಣ ಹಂಚಿಕೊಳ್ಳುವ ಸಂಬಂಧ ಇಬ್ಬರ ನಡುವೆ ಜಗಳ ಉಂಟಾಗಿತ್ತು. ತಾವು ಪರಸ್ಪರ ಮೋಸ ಮಾಡುತ್ತಿಲ್ಲ ಎಂಬುದನ್ನು ಪ್ರಮಾಣೀಕರಿಸಲು ಇಬ್ಬರೂ ಗಂಗೆ ಮುಟ್ಟಿ ಆಣೆ ಮಾಡಲು ತೇಜೂರು ಕೆರೆಗೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಎರಡೂ ಮೃತದೇಹಗಳನ್ನು ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದರು. ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
0 ಕಾಮೆಂಟ್‌ಗಳು