ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು, ಆರೋಗ್ಯ ತಪಾಸಣೆ ಇಲ್ಲದಿದ್ದರೂ ಎಲ್ಲ ಸಮಸ್ಯೆಗೆ ಸರ್ಕಾರದ ಪರಿಹಾರ ಧ್ಯಾನ ! : ಎಐಡಿಎಸ್‍ಓ ವ್ಯಂಗ್ಯ
ನವೆಂಬರ್ 05, 2022
ಮೈಸೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು, ನಿಯಮಿತ ಆರೋಗ್ಯ ತಪಾಸಣೆ ಇಲ್ಲದಿದ್ದರೂ `ಧ್ಯಾನ’ವೇ ಎಲ್ಲ ಸಮಸ್ಯೆಗೆ ಸರ್ಕಾರದ ಪರಿಹಾರವಾಗಿದೆ ಎಂದು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಶಿಕ್ಷಣ ಸಚಿವಾಲಯ ಸಿದ್ಧಪಡಿಸಿರುವ ವರದಿ ಪ್ರಕಾರ (ಯು.ಡಿ. ಐ.ಎಸ್.ಇ.+) ರಾಜ್ಯದ 76,450 ಶಾಲೆಗಳ ಪೈಕಿ, ಸುಮಾರು 1001 ಶಾಲೆಗಳಲ್ಲಿ ಅಂದರೆ, 943 ಸರ್ಕಾರಿ ಶಾಲೆಗಳು, 10 ಅನುದಾನಿತ ಶಾಲೆಗಳು ಮತ್ತು 48 ಖಾಸಗಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. 75,919 ಹೆಣ್ಣು ಮಕ್ಕಳ ಶಾಲೆಗಳ ಪೈಕಿ 1,570 ಶಾಲೆಗಳ ಶೌಚಾಲಯ ಇದ್ದರೂ ಪ್ರಯೋಜನಕ್ಕಿಲ್ಲ. 328 ಶಾಲೆಗಳಲ್ಲಿ ಶೌಚಾಲಯವೇ ಇಲ್ಲ! 74,975 ಶಾಲೆಗಳ ಪೈಕಿ, 2,628 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲ ಮತ್ತು 3,522 ಶಾಲೆಗಳ ಶೌಚಾಲಯ ಇದ್ದರೂ ಉಪಯೋಗಕ್ಕೆ ಬರುತ್ತಿಲ್ಲ. 712 ಶಾಲೆಗಳಿಗೆ ವಿದ್ಯುತ್ ಸೌಲಭ್ಯ ಇಲ್ಲ ಮತ್ತು 220 ಶಾಲೆಗಳಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. 8,153 ಶಾಲೆಗಳಲ್ಲಿ ಕೈ ತೊಳೆಯಲು ಸೌಲಭ್ಯ ಇಲ್ಲ. 22,616 ಶಾಲೆಗಳಲ್ಲಿ ವಿಶೇಷ ಅಗತ್ಯವಿರುವ ಮಕ್ಕಳಿಗೆ ಇಳಿಜಾರಿನ ವ್ಯವಸ್ಥೆ ಇಲ್ಲ. 12,442 ಶಾಲೆಗಳಲ್ಲಿ ಆರೋಗ್ಯ ತಪಾಸಣೆಯೇ ನಡೆದಿಲ್ಲ ಎಂದು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಇದು ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿನ ಮೂಲಭೂತ ವ್ಯವಸ್ಥೆಯ ಸ್ಥಿತಿ-ಗತಿ. ದೇಶದ ಭವಿಷ್ಯವನ್ನು ತನ್ನ ಮಡಿಲಲ್ಲಿ ಹೊತ್ತಿರುವ ಶಾಲೆಗಳ ದಯನೀಯ ಪರಿಸ್ಥಿತಿಯ ಬಗ್ಗೆ ಸರ್ಕಾರವು ನಿರ್ಲಕ್ಷ್ಯದಿಂದ ಇರುವುದು ಅತ್ಯಂತ ಖಂಡನೀಯ ಎಂದಿರುವ ಅವರು, ಸರ್ಕಾರಿ ಶಾಲೆಗಳ ವಾಸ್ತವ ಪರಿಸ್ಥಿತಿ ಇನ್ನೂ ಘೋರವಾಗಿದೆ. ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 35,000 ಶಿಕ್ಷಕರ ಕೊರತೆ ಇದೆ ಮತ್ತು 4,767 ಏಕ ಶಿಕ್ಷಕ ಶಾಲೆಗಳಿವೆ. ಅಂತಹ ಏಕ ಶಿಕ್ಷಕರಿರುವ 10 ಶಾಲೆಗಳು ಚಾಮರಾಜನಗರದಲ್ಲಿ, 30 ಶಾಲೆಗಳು ರಾಯಚೂರಿನಲ್ಲಿ ಇದೆ. ಅಲ್ಲದೆ, ಈ ವರ್ಷ 1,60,000 ಮಕ್ಕಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬಂದಿದ್ದಾರೆ. ಅಭಿವೃದ್ಧಿಗೊಳಿಸಲು, ಮೂಲ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರದ ಮುಂದೆ ಇಷ್ಟು ಅಗಾಧ ಸಾಧ್ಯತೆಗಳು ಮತ್ತು ಜವಾಬ್ದಾರಿ ಇರುವಾಗ, ಇದರ ಬಗ್ಗೆ ಕಿಂಚಿತ್ತೂ ಕ್ರಮ ವಹಿಸದೆ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಿಸಲು ಹತ್ತು ನಿಮಿಷಗಳ ಧ್ಯಾನ ಮಾಡಿ ಎಂದು ಹೇಳುತ್ತಿರುವುದು ಸರ್ಕಾರ ತನ್ನ ಅಜೆಂಡಾವನ್ನು ತರಲು ಮಾಡಿರುವ ಕ್ರಮ ಎಂದು ಆರೋಪಿಸಿದ್ದಾರೆ. ಎಲ್ಲ ಸೌಲಭ್ಯಗಳನ್ನು ಹೊಂದಿರುವ ಪರಿಣಾಮಕಾರಿ ಪರಿಸರದಲ್ಲಿ, ನುರಿತ ಶಿಕ್ಷಕರ ಪಾಠದಿಂದ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳೆಯುತ್ತದೆ, ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ, ಇತರೆ ಮೂಲಭೂತ ಸೌಕರ್ಯಗಳು ಅಂದರೆ, ಶೌಚಾಲಯ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳು, ಸಮರ್ಪಕವಾದ ಬಿಸಿಯೂಟ-ಇವುಗಳಿಂದ ದೈಹಿಕ ಆರೋಗ್ಯ ಉಳಿಸಿಕೊಳ್ಳಲು ಸಹಾಯಕವಾಗುತ್ತದೆ. ಸರ್ಕಾರವು ತನ್ನ ಅಜೆಂಡಾವನ್ನು ಹೇರುವ ಕೆಲಸ ಮಾಡದೆ, ಈ ತುರ್ತು ಕೆಲಸಗಳನ್ನು ಮಾಡುವಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
0 ಕಾಮೆಂಟ್‌ಗಳು