ಪ್ರತಿಭೆಗೆ ಹೆಚ್ಚು ಅಂಕಗಳು ಮಾನದಂಡವಲ್ಲ : ಎಂ.ಎಲ್.ರಘುನಾಥ್
ನವೆಂಬರ್ 04, 2022
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ, ಹಾಗೂ ಅಭಿನಂದನಾ ಸಮಾರಂಭ
-ನಜೀರ್ ಅಹಮದ್, ಪಾಂಡವಪುರ
ಮೈಸೂರು : ಯಾವುದೇ ವಿದ್ಯಾರ್ಥಿಯ ಪ್ರತಿಭೆಯನ್ನು ಅವರು ಗಳಿಸಿದ ಅಂಕಗಳ ಮೇಲೆ ಅಳೆಯಲಾಗದು. ಪ್ರತಿಭೆಗೆ ಹೆಚ್ಚು ಅಂಕಗಳಷ್ಟೇ ಮಾನದಂಡವಲ್ಲ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ, ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದವರಷ್ಟೇ ಪ್ರತಿಭಾವಂತರು ಕಡಿಮೆ ಅಂಕ ಪಡೆದವರು ಪ್ರತಿಭಾವಂತರಲ್ಲ ಎನ್ನುವುದಾದರೇ ಕಡಿಮೆ ಅಂಕ ಪಡೆದವರಿಗೆ ಪ್ರೋತ್ಸಾಹ ಬೇಡವೇ? ಎನ್ನುವುದರ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಸಂಗೀತಗಾರರು, ಆಕರ್ಷಕ ಚಿತ್ರಕಾರರು, ಅತ್ಯುತ್ತಮ ಕ್ರೀಡಾಪಟುಗಳು, ಪ್ರಖಾಂಡ ವಾಗ್ಮಿಗಳು ಇದ್ದಾರೆ. ಎಲ್ಲರೂ ತಮ್ಮದೇ ಆದ ವೈಯುಕ್ತಿಕ ಕಲೆಗಳಲ್ಲಿ ಪರಿಣಿತರಾಗಿರುತ್ತಾರೆ. ಇವರನ್ನು ಪ್ರತಿಭಾವಂತರು ಅಲ್ಲ ಎನ್ನುವುದಾದರೇ ಇವರ ಆತ್ಮವಿಶ್ವಾಸ ಕಡಿಮೆ ಮಾಡಿದಂತಾಗುವುದಿಲ್ಲವೇ? ಇಂತಹ ಮಕ್ಕಳನ್ನು ಕಡೆಗಣಿಸಿದರೆ ಇವರಲ್ಲಿ ತಮ್ಮ ಬಗ್ಗೆ ಕೀಳರಿಮೆ ಉಂಟಾಗುವ ಅಪಾಯವೂ ಇದೆ. ಇದಕ್ಕೆ ನಾವು ಕಾರಣರಾಗಬಾರದು ಎಂದು ಸಲಹೆ ನೀಡಿದರು. ಹೆಚ್ಚು ಅಂಕ ಪಡೆದವರು ಉನ್ನತ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸುತ್ತಾರೆ ಎಂಬ ಪ್ರತಿತೀಯೂ ಇದೆ. ಆದರೆ, ಕಡಿಮೆ ಅಂಕ ಪಡೆದವರ ಮಾಲಿಕತ್ವದ ಸಂಸ್ಥೆಗಳಲ್ಲಿ ಹೆಚ್ಚು ಅಂಕ ಪಡೆದವರು ಉದ್ಯೋಗಿಗಳಾಗಿದ್ದರೇ ಎನ್ನುವುದೂ ಸತ್ಯ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೇ, ಇಂದು ಜಗತ್ತಿನಲ್ಲೇ ಅತ್ಯುತ್ತಮ ಐಟಿ ಕಂಪನಿ ಮಾಲಿಕರಾದ ನಾರಾಯಣ ಮೂರ್ತಿ ಅವರು ವಿಪ್ರೋ ಸಂಸ್ಥೆಯಲ್ಲಿ ಕೆಲಸ ಕೇಳಲು ಹೋಗಿದ್ದರು. ಅಲ್ಲಿ ಕೆಲಸ ಸಿಗದ ಕಾರಣ ತಾವೇ ಇನ್ಫೋಸಿಸ್ ನಂತಹ ಬೃಹತ್ ಸಂಸ್ಥೆಯನ್ನು ಕಟ್ಟಿದ್ದಾರೆ. ಈ ಘಟನೆಯನ್ನು ಅವರೇ ಹೇಳಿಕೊಂಡಿದ್ದಾರೆ ಎಂದು ಸ್ಮರಿಸಿದರು. ಹೆಚ್ಚು ಅಂಕ ಪಡೆದವರು ಸಮಾಜದ ಅಭಿವೃದ್ಧಿಗೆ ವಿಮುಖರಾಗಿರುವುದು ಇಂದು ಬಹುತೇಕ ಕಂಡುಬಂದಿದೆ. ಕೇವಲ ಪುಸ್ತಕ, ಓದು, ಪರೀಕ್ಷೆ ಅಂಕಗಳಷ್ಟೇ ಜೀವನವಲ್ಲ. ಇವರು ಸಮಾಜದ ಜತೆ ಬೆರೆಯುವುದಿಲ್ಲ. ಆದರೆ, ನಾವು ಹೆಚ್ಚು ಸಮಾಜಮುಖಿಯಾಗಿ ಇದ್ದರೆ ಮಾತ್ರ ಸಮಾಜಕ್ಕೆ ಕೊಡುಗೆ ನೀಡುವವರಾಗುತ್ತೇವೆ. ವಿದ್ಯಾರ್ಥಿಗಳು ಸಮಾಜಕ್ಕೆ ವಿರುದ್ಧವಾದ ಕೆಲಸ ಮಾಡಬಾರದು. ಜ್ಞಾನಾರ್ಜನೆಯ ಜತೆಗೆ ಎಲ್ಲರೊಂದಿಗೂ ಬೆರೆಯುವುದನ್ನು ಕಲಿಯಿರಿ. ನೀವು ಪ್ರತಿಭಾವಂತರು ಎನ್ನುವುದಾದರೇ ಮೊದಲು ನಿಮ್ಮ ಸೇವೆ ಭಾರತ ದೇಶದ ಅಭಿವೃದ್ಧಿಗೆ ಮೀಸಲಿಡಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ, ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು ಇನ್ನಿತರರು ಇದ್ದರು.
0 ಕಾಮೆಂಟ್‌ಗಳು