ಹಾಡ ಹಗಲೇ ಜನರನ್ನು ಅಟ್ಟಾಡಿಸಿದ್ದ ಚಿರತೆ ಕೊನೆಗೂ ಅಂದರ್

ಬಲೆಯಲ್ಲಿ ಸೆರೆ ಹಿಡಿದು ಪ್ರಜ್ಞೆ ತಪ್ಪಿಸಿ ಬೋನಿಗೆ ತಳ್ಳಿ ರವಾನೆ

ವರದಿ-ಮೊಹಮ್ಮದ್ ಶಬ್ಬೀರ್, ಕೆ.ಆರ್.ನಗರ

ಕೆ.ಆರ್.ನಗರ : ಹಾಡ ಹಗಲೇ ಜನರನ್ನು ಅಟ್ಟಾಡಿಸಿ ದಾಳಿ ನಡೆಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದ್ದು, ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ರಾತ್ರಿ ವಾಹನ ಸವಾರರಿಗೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಈ ಚಿರತೆಯ ಓಡಾಟದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದ ಕೆಲವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದ ಈ ಭಾಗರದ ಜನರಲ್ಲಿ ತೀವ್ರ ಆತಂಕ ಎದುರಾಗಿತ್ತು.
ಚಿರತೆ ಇರುವಿಕೆ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು  ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ರಾತ್ರಿ 11 ಗಂಟೆಯ ತನಕ ಹುಡುಕಾಟ ನಡೆಸಿದರೂ ಚಿರತೆ ಪತ್ತೆಯಾಗಲಿಲ್ಲ. 
ಇಂದು ಬೆಳಿಗ್ಗೆ 7 ಗಂಟೆಗೆ ಮುಳ್ಳೂರು ರಸ್ತೆಯ ದಾಸ್ ಪ್ರಕಾಶ್ ಶಾಲೆಯ ಬಳಿ ನಾಯಿ ಹಿಡಿದುಕೊಂಡು ವಾಕಿಂಗ್ ಹೊರಟಿದ್ದ ಪರಶಿವ ಎಂಬವರ ಮೇಲೆ ಇದ್ದಕ್ಕಿದ್ದಂತೆ ಎರಗಿದ ಚಿರತೆ ಬಳಿಕ ಕರಿಗೌಡ ಎಂಬವರ ಮೇಲೆ ದಾಳಿ ನಡೆಸಿ ವಾಹನ ಸವಾರರ ಮೇಲೂ ಎರಗಿತು. ಈ ವೇಳೆ ಜನರ ರಕ್ಷಣೆಗೆ ದಾವಿಸಿದ ಉಪ ವಲಯ ಅರಣ್ಯಾಧಿಕಾರಿ ಮಂಜು ಅವರ ಮೇಲೂ ಚಿರತೆ ದಾಳಿ ಮಾಡಿ ನಂತರ ಜನರ ಕೂಗಾಟದಿಂದ ಭಯಗೊಂಡು ಪೊದೆಯೊಳಗೆ ಅಡಗಿತು.

ಈ ಸಂದರ್ಭದಲ್ಲಿ ಹುಣಸೂರು ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಮತ್ತು ವಲಯ ಅರಣ್ಯಾಧಿಕಾರಿ ರಶ್ಮಿ ನೇತೃತ್ವದಲ್ಲಿ ಚಿರತೆ ಅಡಗಿ ಕುಳಿತಿದ್ದ ಸ್ಥಳದ ಸುತ್ತಾ ಬಲೆ ಹಾಕಿ ಅರವಳಿಕೆ ಚುಚ್ಚು ಮದ್ದನ್ನು ಎರಡು ಬಾರಿ ನೀಡಿ ಪ್ರಜ್ಞೆ ತಪ್ಪಿಸಿ ನಂತರ ಚಿರತೆಯನ್ನು ಬೋನಿನಲ್ಲಿ ಹಾಕಲಾಯಿತು. 
ಚಿರತೆ ನೋಡಲು ನೂರಾರು ಜನ ಜಮಾಯಿಸಿದ್ದರು. ಸ್ಥಳದಲ್ಲಿ ತಹಸಿಲ್ಧಾರ್ ಎಂ.ಎಸ್.ಯಧು ಗಿರೀಶ್, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮು, ಪಿಎಸ್‍ಐ ಗಳಾದ ಚಂದ್ರಹಾಸ್, ಸ್ವಾಮಿ ನಾಯಕ, ಪುರಸಭಾ ಅಧ್ಯಕ್ಷ ಪ್ರಕಾಶ್, ಸದಸ್ಯರಾದ ಕೆ.ಎಲ್.ಜಗದೀಶ್, ನಟರಾಜ್ ಇನ್ನಿತರರು ಹಾಜರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು