ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಬಿಜೆಪಿ ಕಾರ್ಯಕ್ರಮವಾಗಿದೆ: ತಮ್ಮದೇ ಪಕ್ಷದ ವಿರುದ್ಧ ವಿಶ್ವನಾಥ್ ವಾಗ್ದಾಳಿ
ನವೆಂಬರ್ 11, 2022
``ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆಸಬೇಕಿತ್ತು’’
ಮೈಸೂರು : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಒಂದು ಪಕ್ಷದ ಕಾರ್ಯಕ್ರಮವಾಗಿದ್ದು, ವಿಷಾಧನೀಯ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಸ್ವಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಶುಕ್ರವಾರ ಜಿಲ್ಲಾಡಳಿತ ಆಯೋಜಿಸಿದ್ದ ಕನಕದಾಸರ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಿ ಕನಕದಾಸರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಸಂತೋಷದ ವಿಚಾರ. ಆದರೆ ಈ ಕಾರ್ಯಕ್ರಮ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ನಡೆಯುತ್ತಿದೆ. ದೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಆದರೆ ಅವರೆಲ್ಲರನ್ನು ಕರೆಯದೆ ಒಂದು ಪಕ್ಷಕ್ಕೆ ಸೀಮಿತವಾಗಿ ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೆಂಪೇಗೌಡರ ಪ್ರತಿಮೆ ನಿರ್ಮಾಣ ಸರ್ಕಾರದ ಹಣದಲ್ಲಿ ಮಾಡುತ್ತಿರುವುದು. ಹಾಗಿದ್ದ ಮೇಲೆ ನಾಡಿನ ಪ್ರಮುಖ ನಾಯಕರು ಮತ್ತು ಎಲ್ಲಾ ಪಕ್ಷದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ನಾಡಿನ ಕಾರ್ಯಕ್ರಮ ಮಾಡಬೇಕಿತ್ತು. ಅದು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಬಿಜೆಪಿ ಪಕ್ಷದ ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಹೇಳಿಕೆ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ವಿಶ್ವನಾಥ್, ಈಗಾಗಲೇ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಆ ವಿಚಾರವನ್ನು ಮುಂದುವರೆಸುವುದು ಸರಿಯಲ್ಲ ಎಂದರು. ಸಿದ್ಧರಾಮಯ್ಯ ಅವರ ಮನದ ಮಾತನ್ನು ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಎಚ್.ವಿಶ್ವನಾಥ್, ಸಿದ್ಧರಾಮಯ್ಯ ಸಿದ್ಧರಾಮಯ್ಯನೆ, ಸಿದ್ಧರಾಮಯ್ಯರವರ ಬಗ್ಗೆ ಆ ರೀತಿ ಮಾತನಾಡಬಾರದು. ಸಂಸದ ಪ್ರತಾಪ್ ಸಿಂಹನಿಗೆ ಏನು ಗೊತ್ತು. ಪ್ರತಾಪ್ ಸಿಂಹ ಹೇಗೆ ಚುನಾವಣೆಯಲ್ಲಿ ಗೆದ್ದ ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ಕುಟುಕಿದರು. ಕನಕದಾಸರು ಸಮಾಜ ಸುಧಾರಣೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಂದಿನ ಎಲ್ಲಾ ರಾಜಕಾರಣಿಗಳು ಅವರ ಮಾತಿನಂತೆ ನಡೆಯಬೇಕು ಎಂದು ಹೇಳಿದರು.
ಜಿಲ್ಲಾಡಳಿತದ ವಿರುದ್ಧ ಬೇಸರ:
ಕನಕದಾಸರ ಜಯಂತಿ ಆಚರಣೆ ನಾಡಿದಾದ್ಯಂತ ನಡೆಯುತ್ತಿದೆ. ಮೈಸೂರಿನಲ್ಲಿ 10.30 ಗಂಟೆಯಾದರೂ ಯಾವೊಬ್ಬ ಅಧಿಕಾರಿಗಳು ಬಾರದಿರುವುದು ಬೇಸರ ತರಿಸಿದೆ. ಇದು ಜಿಲ್ಲಾಡಳಿತದ ಬೇಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
0 ಕಾಮೆಂಟ್‌ಗಳು