ಖ್ಯಾತ ಕಥೆಗಾರ ಕುಕ್ಕರಹಳ್ಳಿ ಬಸವರಾಜು ನಿಧನ : ಶುಕ್ರವಾರ ಅಂತ್ಯಕ್ರಿಯೆ

 ಮೈಸೂರು : ಖ್ಯಾತ ಕಥೆಗಾರ, ಲೇಖಕ, ರಂಗಕರ್ಮಿ ಕುಕ್ಕರಹಳ್ಳಿ ಬಸವರಾಜು (67) ಗುರುವಾರ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಧ್ಯಾಹ್ನ ನಿಧರಾಗಿದ್ದಾರೆ.
ನಗರದ ಕುಕ್ಕರಹಳ್ಳಿಯಲ್ಲಿ ಧನಗಳ್ಳಿ ಸಿದ್ದಯ್ಯ ಮತ್ತು ನಿಂಗಮ್ಮ ದಂಪತಿಯ ಪುತ್ರನಾಗಿ ಜನಿಸಿದ ಬಸವರಾಜು ಅವರು ಬಹುಮುಖ ಪ್ರತಿಭೆ. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜು ಮತ್ತು ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದ್ದರು. 
ಪದವಿ ಓದುತ್ತಿದ್ದಾಗಲೇ ಸ್ಟೂಡೆಂಟ್ ಫಾರ್ ಡೆಮಾಕ್ರಸಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿ ದುಡಿದಿದ್ದರು. ಎಂಸಿಡಿಸಿಸಿ ಬ್ಯಾಂಕ್‍ನ ಸೀನಿಯರ್ ಮ್ಯಾನೇಜರ್ ಅನೂಪ್ ಎಸ್.ಬಸು ಇವರ ಪುತ್ರರಾಗಿದ್ದಾರೆ. ಇವರ ಅಂತ್ಯಕ್ರಿಯೆಯು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಂಗಕರ್ಮಿಯಾಗಿ ಬಿ.ವಿ.ಕಾರಂತರ ನಿರ್ದೇಶನದ ಹಯವದನ ನಾಟಕದ ಜೊತೆಗೆ ಹಲವು ನಿರ್ದೇಶಕರ ನಾಟಕಗಳು ಹಾಗೂ ಸಾಕ್ಷರತೆಯ ಬೀದಿ ನಾಟಕಗಳಲ್ಲಿ ನಟಿಸಿದ್ದರು. ಮೈಸೂರಿನ ಮಂಟೇಸ್ವಾಮಿ ಪ್ರತಿಷ್ಠಾನದ ಸದಸ್ಯರಾಗಿ ಸಂಕುಲ ಸಾಂಸ್ಕøತಿಕ ಸಂಘಟನೆಯ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ರಂಗಾಯಣ ಹಾಗೂ ಮಂಟೇಸ್ವಾಮಿ ಪ್ರತಿಷ್ಠಾನದ ಜತೆಗೂಡಿ ಮಂಟೇಸ್ವಾಮಿ ಜಾನಪದಮೇಳ, ರಂಗಾಯಣದೊಟ್ಟಿಗೆ ವಿಮರ್ಶೆಯ ವಿಮರ್ಶೆ, ಮೈಸೂರಿ ಜಿಲ್ಲಾಡಳತದೊಂದಿಗೆ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ 50ರ ಮಧ್ಯರಾತ್ರಿ ಸ್ವಾತಂತ್ರ್ಯದ ಆಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. 
ಪ್ರಶಸ್ತಿಗಳು:
ಕುಕ್ಕರಹಳ್ಳಿ ಬಸವರಾಜು ಅವರಿಗೆ 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ. 2003 ರಲ್ಲಿ ವಿಶ್ವನಾಥ್ ಕೆ.ವಾರಂಬಳ್ಳಿ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ, 2016 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ದೊರೆತಿದೆ. 2016 ರ  ಡಿಸೆಂಬರ್ 12 ರಂದು ನಡೆದ ಮೈಸೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಸಂತಾಪ : ಕುಕ್ಕರಹಳ್ಳಿ ಬಸವರಾಜು ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಸಾಹಿತಿ ದೇವನೂರು ಮಹಾದೇವ, ಪ್ರೊ.ಎಚ್.ಗೋವಿಂದಯ್ಯ, ಮಾಜಿ ಮುಡಾ ಅಧ್ಯಕ್ಷ ಸಿ.ಬಸವೇಗೌಡ, ಜೆ.ಸೋಮಶೇಖರ್, ಪ್ರಗತಿಪರ ಚಿಂತಕ ಡಾ.ತುಕಾರಾಂ, ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ಹಿರಿಯ ಸಮಾಜವಾದಿ ಪ.ಮಲ್ಲೇಶ್, ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ ಜನ್ನಿ, ಅಪ್ಪಾಜಿ ಗೌಡ, ಪ್ರೊ.ಕಾಳಚನ್ನೇಗೌಡ, ನೀಲಗಿರಿ ತಳವಾರ್, ಆಲಗೂಡು ಶಿವಕುಮಾರ್, ಶಂಭಯ್ಯ, ವರದಯ್ಯ, ರಾಜು, ಮರಿಮಲ್ಲಪ್ಪ ಕಾಲೇಜು ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಸಂತಾಪ ಸೂಚಿಸಿ ಅಂತಿಮ ದರ್ಶನ ಪಡೆದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು