ಇದು ಭಿಕ್ಷುಕರ ಸರ್ಕಾರ : ರೈತರ ಆರೋಪ, ತಟ್ಟೆ ಲೋಟ ಬಡಿದು ಸರ್ಕಾರವನ್ನು ಅಣಕಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ
ನವೆಂಬರ್ 03, 2022
ಮೈಸೂರು : ಕಬ್ಬಿಗೆ ನೀಡುತ್ತಿರುವ ಈಗಿನ ಎಫ್.ಆರ್.ಪಿ. ದರವನ್ನು ಪರಿಷ್ಕರಿಸಿ ಹೆಚ್ಚು ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸರ್ಕಾರ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಜಿಲ್ಲಾಡಳಿತ ರೈತರನ್ನು ಕಡೆಗಣಿಸಿ ಭಿಕ್ಷುಕರ ರೀತಿ ವರ್ತಿಸುತ್ತಿದೆ ಎಂದು ಗುರುವಾರ ತಟ್ಟೆ ಲೋಟ ಬಡಿದುಕೊಂಡು ಸರ್ಕಾರವನ್ನು ಅಣಕಿಸುವ ರೀತಿ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರೈತರು ಕಣ್ಣು, ಕಿವಿ ಇಲ್ಲದ ಇದೊಂದು ಭಂಡ ಸರ್ಕಾರ, ಈ ಸರ್ಕಾರವನ್ನು ಎಚ್ಚರಿಸಲು ತಟ್ಟೆ ಲೋಟ ಬಡಿದು ಭಿಕ್ಷೆ ಬೇಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ, ನಾನು ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್.ಟಿ. ಸೋಮಶೇಖರ್ ರವರ ಜೊತೆ ಮಾತನಾಡಿದ್ದು ನ.8 ರಂದು ಸಭೆ ಕರೆಯುವುದಾಗಿ ಮಂತ್ರಿಗಳಿಗೆ ಕೋರಿದ್ದೇನೆ ಅಂದು ಅವರು ಬರಬಹುದು ಬರದಿದ್ದರೆ ನಾನೇ ಸಭೆ ಮಾಡಿ ನಿಮ್ಮ ಒತ್ತಾಯಗಳನ್ನು ಸರ್ಕಾರ ಮತ್ತು ಮಂತ್ರಿಗಳ ಗಮನಕ್ಕೆ ತರುತ್ತೇನೆ. ಹಾಗಾಗಿ ನಿಮ್ಮ ಅಹೋರಾತ್ರಿ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಸೊಪ್ಪು ಹಾಕದ ರೈತರು ನೀವು ಏನು ಹೇಳಿದರೂ ನಾವು ಕೇಳುವುದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಮ್ಮೆಲ್ಲಾ ಒತ್ತಾಯಗಳನ್ನು ಈಡೇರಿಸಿದರೆ ಮಾತ್ರ ನಾವು ಅಹೋರಾತ್ರಿ ಧರಣಿ ಕೈಬಿಡುತ್ತೇವೆ ಎಂದು ತಿಳಿಸಿದರು. ಒಂದು ಟನ್ ಕಬ್ಬಿಗೆ 3500 ಬೆಲೆ ನೀಡಬೇಕು. ಕಳೆದ 40 ವರ್ಷಗಳಿಂದಲೂ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಮಂಜೂರು ಮಾಡದೆ ಭೂಗಳ್ಳರು, ಬಂಡವಾಳಶಾಹಿಗಳ ಹೆಸರಿನಲ್ಲಿ ಆರ್ ಟಿ ಸಿ ಓಡುತ್ತಿದ್ದು ಇದನ್ನು ರದ್ದು ಮಾಡಿ ನೈಜ ರೈತರಿಗೆ ಸಾಗುವಳಿ ಪತ್ರವನ್ನು ಕೊಡಿಸುವಂತಾಗಬೇಕು. ಕಳೆದ 5 ತಿಂಗಳಿಂದಲೂ ನಿರಂತರ ಮಳೆಯಿಂದಾಗಿ ಜಿಲ್ಲೆಯ ಸಾವಿರಾರು ಎಕರೆಯಲ್ಲಿ ಬೆಳೆ ನಾಶವಾಗಿದ್ದು ನೈಜ ಸಮೀಕ್ಷೆ ಮಾಡಿ ಸಂಪೂರ್ಣ ಬೆಳ್ಳನಷ್ಟವನ್ನು ಕೊಡಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ ನಂಜನಗೂಡು ತಾಲೂಕು ಅಧ್ಯಕ್ಷ ಹಾಡ್ಯ ರವಿ, ಅಂಬಳೆ ಮಂಜುನಾಥ್, ಕೆರೆಹುಂಡಿ ಶಿವಣ್ಣ, ಚುಂಚರಾಯನಹುಂಡಿ ಮಂಜು, ಸಿದ್ದರಾಮ, ಮಲ್ಲಪ್ಪ, ಶಿವು, ಗಿರೀಶ್, ಕುಮಾರ್, ಕೂಶಣ್ಣ, ರಾಜಣ್ಣ, ರಾಜೇಶ್, ಮಾರ್ಬಳ್ಳಿ ನೀಲಕಂಠಪ್ಪ, ಹಿರೇನಂದಿ ಮಹದೇವಪ್ಪ ಇನ್ನು ಮುಂತಾದವರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು