`ಪುನೀತೋತ್ಸವ’ದಲ್ಲಿ ಕುಣಿದು ಕುಪ್ಪಳಿಸಿದ ಪ್ರೇಕ್ಷಕರು : ಶಿವರಾಜ್‍ಕುಮಾರ್ ನಟನೆಯ `ವೇದ’ ಚಿತ್ರದ ಆಡಿಯೋ ಬಿಡುಗಡೆ

ಪಾಂಡವಪುರ : ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನೀತೋತ್ಸವದ ಮೂರನೇ ದಿನದ ಕಾರ್ಯಕ್ರಮವನ್ನು ಅಮೇರಿಕಾದ ಅಕ್ಕ ಒಕ್ಕೂಟದ ಅಧ್ಯಕ್ಷ ಡಾ.ಅಮರನಾಥ್ ಭಾನುವಾರ ಉದ್ಘಾಟಿಸಿದರು.
ಮಜಾ ಭಾರತ ಖ್ಯಾತಿಯ ಜಗಪ್ಪ ತಂಡದಿಂದ ಹಾಸ್ಯ, ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಸಂಗಡಿಗರಿಂದ ಸಂಗೀತೋತ್ಸವ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರುದ್ರ ಮಾಸ್ಟರ್ ತಂಡದಿಂದ ನೃತ್ಯ ಹಾಗೂ ಡಾ.ಶಿವರಾಜ್‍ಕುಮಾರ್ ಅಭಿನಯದ ವೇದ ಸಿನಿಮಾದ “ಗಿಲ್ಲಕೋ ಶಿವ” ಆಡಿಯೋ ರಿಲೀಸ್ ಹಿನ್ನೆಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರನ್ನು ಕಲಾವಿದರು ರಂಜಿಸಿದರು. 

ಸಂಗೀತ ರಸ ಸಂಜೆಯಲ್ಲಿ ತಮ್ಮ ನೆಚ್ಚಿನ ಗೀತೆಗಳಿಗೆ ಜನ ಕುಣಿದು ಕುಪ್ಪಳಿಸಿದರು. ಇಡೀ ಕ್ರೀಡಾಂಗಣದಲ್ಲಿ ಪುನೀತ್ ಭಾವಚಿತ್ರವಿರುವ ಕನ್ನಡ ಬಾವುಟ ಹಾರಾಡಿದವು. ಕಾರ್ಯಕ್ರಮದ ಪ್ರಾರಂಭವಾದಗಿನಿಂದ ಕೊನೆಯವರೆಗೂ ಪುನೀತ್ ಅಭಿಮಾನಿಗಳು ಅಪ್ಪು, ಅಪ್ಪು, ಅಪ್ಪು ಎಂದು ಜೈಕಾರ ಕೂಗಿದರು.
ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರು ಭಾವಪೂರ್ಣವಾಗಿ ಹಾಡಿದ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ ಹಾಡಿಗೆ ಇಡೀ ಕ್ರೀಡಾಂಗಣದಲ್ಲಿ ನೆರೆದಿದ್ದ ಜನ ಎದ್ದು ನಿಂತು ಅಪ್ಪು ಸ್ಮರಣೆಯೊಂದಿಗೆ ನಮನ ಸಲ್ಲಿಸಿದರು. ಹಿನ್ನೆಲೆ ಗಾಯಕರಾದ ಶಶಿಕಲಾ, ಚೈತ್ರ ಹಾಡಿನ ಮೂಲಕ ರಂಜಿಸಿದರೆ, ಕಿರು ತೆರೆ ನಟಿಯರಾದ ಸನ್ನಿಧಿ ಮತ್ತು ಶರ್ಮಿಳಾ ಗೌಡ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ನಿರೂಪಕಿ ಅನುಶ್ರೀ ತಮ್ಮ ಮೊನಚು ಮತ್ತು ಹಾಸ್ಯ ಭರಿತ ಮಾತುಗಳಿಂದ ಜನರ ಗಮನ ಸೆಳೆದರು.
ವೇದ ಚಿತ್ರದ ಆಡಿಯೋ ರಿಲೀಸ್ : ನಿರ್ದೇಶಕ ಹರ್ಷ ಅವರು ನಿರ್ಮಿಸಿದ್ದ ಅದ್ದೂರಿ ವೇದಿಕೆಯಲ್ಲಿ ಅಪ್ಪು ಸ್ಮರಣೆಯೊಂದಿಗೆ ನಟ ಶಿವರಾಜ್‍ಕುಮಾರ್ ಅವರ ಅಭಿನಯ ಮತ್ತು ಗೀತಾ ಶಿವರಾಜ್‍ಕುಮಾರ್ ನಿರ್ಮಾಣದ 125ನೇ ಚಿತ್ರ ವೇದ ಸಿನಿಮಾದ ಗಿಲ್ಲಕೋ ಶಿವಾ ಹಾಡನ್ನು ಸಿನಿಮಾ ತಂಡದ ಎಲ್ಲರ ಸಮ್ಮುಖದಲ್ಲಿ ರಿಲೀಸ್ ಮಾಡಲಾಯಿತು. 

ಆಡಿಯೋ ರಿಲೀಸ್ ಬಳಿಕ ನಟ ಶಿವರಾಜ್‍ಕುಮಾರ್ ಮಾತನಾಡಿ, ನಮ್ಮ ಹೋಂ ಪ್ರೋಡಕ್ಷನ್‍ನಲ್ಲಿ ನಿರ್ಮಾಣವಾಗಿರುವ ವೇದ ಸಿನಿಮಾದ ಹಾಡನ್ನು ಪಾಂಡವಪುರದಲ್ಲಿ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ. ನಿರ್ದೇಶಕ ಹರ್ಷ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜತೆಗೂಡಿ ನಿರ್ಮಿಸಿರುವ ಎಲ್ಲಾ ಚಿತ್ರಗಳು ಹಿಟ್ ಆಗಿದೆ. ಭಂಜರಂಗಿ, ಭಜರಂಗಿ-2, ವಜ್ರಕಾಯ ಮತ್ತು ವೇದ ಸಿನಿಮಾಗಳಲ್ಲಿ ಹಾಡು ತುಂಬಾ ಚೆನ್ನಾಗಿ ಬಂದಿದೆ. ಇಂದು ಮಂಗ್ಲಿ ಅವರು ಹಾಡಿರುವ ಸಾಂಗ್ ರಿಲೀಸ್ ಮಾಡಲಾಗಿದೆ. ಸಿನಿಮಾದಲ್ಲಿ ಇನ್ನೂ ಐದು ಹಾಡುಗಳಿವೆ ಎಲ್ಲ ಹಾಡುಗಳು ತುಂಬ ಚೆನ್ನಾಗಿ ಮೂಡಿಬಂದಿದೆ. ವಿಭಿನ್ನ ಸಿನಿಮಾವಾಗಿದ್ದು, ಈ ಸಿನಿಮಾದ ಮೂಲಕ ಶಿವಣ್ಣ ನಿಮಗೆ ಇನ್ನೂ ಹತ್ತಿರವಾಗಲಿದ್ದಾರೆ ಎಂದರು.

ಗೀತ ಶಿವರಾಜ್‍ಕುಮಾರ್ ಅವರು ಸಿನಿಮಾಕ್ಕೆ ಬೇಕಾದ ಎಲ್ಲವನ್ನು ಒದಗಿಸಿದ್ದಾರೆ. ಸಿನಿಮಾವನ್ನು ಕಷ್ಟಪಟ್ಟು ಮಾಡಿಲ್ಲ ಬದಲಿಗೆ ಬಹಳ ಇಷ್ಟಪಟ್ಟು ಮಾಡಿದ್ದೇವೆ. ಸಿನಿಮಾಕ್ಕೆ ನನ್ನ ಮಗಳು, ಸಂಬಂಧಿಕರು ಎಲ್ಲರೂ ಸಹಕಾರ ನೀಡಿದ್ದು, ಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಎಂದು ತಿಳಿಸಿದರು.
ಇದೇ ವೇಳೆ ಶಿವರಾಜ್‍ಕುಮಾರ್ ದಂಪತಿಗಳನ್ನು ಶಾಸಕ ಸಿ.ಎಸ್.ಪುಟ್ಟರಾಜು ದಂಪತಿಗಳು ಸನ್ಮಾನಿಸಿ ಗೌರವಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು