ಎಸ್‍ಡಿಪಿಐ ಪಕ್ಷದಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಸಾಧಕರಿಗೆ ಸನ್ಮಾನ
ಮೈಸೂರು : ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎನ್ನುವುದು ಕನ್ನಡಿಗರ ಬಹುದೊಡ್ಡ ಕನಸು. ಸುಮಾರು 40 ವರ್ಷಗಳಿಂದಲೂ ಯಾವುದೇ ಸರ್ಕಾರಗಳು ಇದನ್ನು ಜಾರಿ ಮಾಡದೆ 7 ಕೋಟಿ ಕನ್ನಡಿಗರನ್ನು ವಂಚಿಸಿ ಅಪಮಾನ ಮಾಡುತ್ತಿವೆ. ಕೂಡಲೇ ಈ ವರದಿ ಯಥಾವತ್ ಜಾರಿಯಾಗಬೇಕು ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದರು. ಮೈಸೂರಿನ ಎನ್.ಆರ್.ಮೊಹಲ್ಲಾ, ಗಾಂಧಿನಗರದ ಸಿದ್ಧಾರ್ಥ ಮೈದಾನದಲ್ಲಿ ಎಸ್‍ಡಿಪಿಐ ಪಕ್ಷದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ `ಒಲವಿನ ಕರ್ನಾಟಕ’ ಕಾರ್ಯಕ್ರಮ ಉದ್ಘಾಟಿಸಿ, ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಕನ್ನಡ ಚಲನ ಚಿತ್ರವನ್ನು ನೋಡಿ ಕಣ್ಣೀರು ಹಾಕುವುದರಿಂದ ಕನ್ನಡಿಗರ ಉದ್ಧಾರ ಆಗಲ್ಲ. ಕನ್ನಡಿಗರ ಗೌರವಯುತ ಬದುಕು ನಿರ್ಮಿಸಲು ನಿಮಗೆ ಆಸಕ್ತಿ ಇದ್ದರೆ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಅವಕಾಶ ಕಲ್ಪಿಸಿ ಎಂದರು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ, ಎ ಶ್ರೇಣಿಯ ಉದ್ಯೋಗಗಳಲ್ಲಿ ಶೇ.80 ಮತ್ತು ಬಿ ಶ್ರೇಣಿಯ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.65 ರಷ್ಟು ಮೀಸಲಾತಿ ಕೊಡಬೇಕು ಎನ್ನುವುದು ಡಾ.ಸರೋಜಿನಿ ಮಹಿಷಿ ವರದಿಯ ಒತ್ತಾಯವಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪುಹಾಸು ಹಾಕಿ ನಮ್ಮ ರಾಜ್ಯಕ್ಕೆ ಸ್ವಾಗತಿಸುತ್ತಿರುವ ಸರ್ಕಾರಗಳು ಕನ್ನಡಿಗರಿಗೆ ಉದ್ಯೋಗ ನೀಡಲೇಬೇಕು ಎಂಬುದನ್ನು ಕಡ್ಡಾಯ ಮಾಡುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಹೊಸ ಶಿಕ್ಷಣ ನೀತಿ ಮೂಲಕ ಹಿಂದಿ ಭಾಷೆಯ ಬಲವಂತದ ಹೇರಿಕೆಯಿಂದ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಭಿಮಾನ ಮತ್ತು ಅಸ್ಮಿತೆಯನ್ನು ಬಲಹೀನ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಕರ್ನಾಟಕದಿಂದ ರಾಜ್ಯಸಭೆಗೆ ತಮಿಳುನಾಡಿನ ನಿರ್ಮಲಾ ಸೀತಾರಾಮನ್, ಕೇರಳದ ರಾಜೀವ್ ಚಂದ್ರಶೇಖರ್ ಮುಂತಾದವರನ್ನು ಆಯ್ಕೆ ಮಾಡಿ ಕಳಿಸುತ್ತಾರೆ. ಏಳು ಕೋಟಿ ಕನ್ನಡಿಗರಲ್ಲಿ ರಾಜ್ಯಸಭೆಯನ್ನು ಪ್ರತಿನಿಧಿಸುವಂತಹ ಸಮರ್ಥರು ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ಇದೂ ಕೂಡ ಕನ್ನಡಿಗರಿಗೆ, ಕನ್ನಡ ನಾಡಿಗೆ ಮಾಡುತ್ತಿರುವ ಅಪಮಾನ ಎಂದರು. ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲದಿದ್ದರೂ ಸರ್ಕಾರ ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಹೊಡೆಯಲು ಮುಂದಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ನಾನು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ರಾಜ್ಯದ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಒಂದು ಪುಟಾಣಿ ಶಾಲಾ ಬಾಲಕಿ ಬುದ್ಧಿ ಹೇಳುವಷ್ಟರ ಮಟ್ಟಿಗೆ ಈ ಆಡಳಿತ ಕುಸಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇನ್ನು ಟಿಪ್ಪು ಪ್ರತಿಮೆ ನಿರ್ಮಾಣದ ವಿಷಯದಲ್ಲಿ ಶಾಸಕ ತನ್ವೀರ್ ಸೇಠ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಮ್ಮ ಪಕ್ಷದ ಸಹಮತವಿದೆ. ತನ್ವೀರ್ ಸೇಠ್ ನಮ್ಮ ರಾಜಕೀಯ ಪ್ರತಿಸ್ವರ್ಧಿ ಅಷ್ಟೇ, ವಿರೋಧಿಯಲ್ಲ. ಇತ್ತೀಚೆಗೆ ಅವರಿಗೆ ರಘು ಎಂಬ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದು, ಇಲ್ಲಿಯ ತನಕವೂ ಪೊಲೀಸರು ಆತನನ್ನು ಬಂಧಿಸಿಲ್ಲ. ತನ್ವೀರ್ ಅವರನ್ನು ಮುಟ್ಟಲು ಅವನಿಗೆ ಸಾಧ್ಯವೇ? ತನ್ವೀರ್ ಸೇಠ್ ರಕ್ಷಣಗೆ ನಾವಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಪ್ರೊ. ನಂಜರಾಜ ಅರಸು, ಮಂಟೇಲಿಂಗಯ್ಯ, ಡಾ.ಕೃಷ್ಣಮೂರ್ತಿ ಚಮರಂ, ಸಾಧೀಖ್ ಪಾಷ, ಸಾಲೋಮನ್ ಸೇರಿದಂತೆ ಹಲವಾರು ಸಾಧಕರನ್ನು ಸನ್ಮಾನಿಸಲಾಯಿತು. ಎಸ್‍ಡಿಪಿಐ ಮುಖಂಡರಾದ ದೇವನೂರು ಪುಟ್ಟನಂಜಯ್ಯ, ಅಬ್ದುಲ್ ಬಶೀರ್, ರಫತ್ ಖಾನ್, ಅಬ್ದುಲ್ ಲತೀಫ್, ಅಮ್ಜದ್ ಖಾನ್, ನೂರುದ್ದೀನ್ ಮೌಲಾನ, ಆಯಿಷಾ ಝಬೀ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 ಕಾಮೆಂಟ್‌ಗಳು