ಗಂಧದ ಗುಡಿ ಫೌಂಡೇಷನ್ ನಿಂದ `ಅಪ್ಪು’ ಹೆಸರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ : ಗಂಧದ ಗುಡಿ ಚಿತ್ರ ವೀಕ್ಷಣೆ
ನವೆಂಬರ್ 09, 2022
ಮೈಸೂರು : ಹೆಸರಾಂತ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ನಗರದ ಗಂಧದ ಗುಡಿ ಫೌಂಡೇಷನ್ ವತಿಯಿಂದ ವಿಜಯನಗರದ ಸಂಜೀವಯ್ಯ ಪ್ರೌಢಶಾಲೆ ವಿಧ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸಂಗಮ್ ಚಿತ್ರಮಂದಿರದಲ್ಲಿ ಗಂಧದ ಗುಡಿ ಚಲನ ಚಿತ್ರ ವೀಕ್ಷಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬುಧವಾರ ಬೆಳಿಗ್ಗೆ ಕಾಂಗ್ರೆಸ್ ಮುಖಂಡ ಕೆ.ಹರೀಶ್ ಗೌಡ ಸಂಜೀವಯ್ಯ ಪ್ರೌಢಶಾಲೆಯಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಸೇವೆಗೆ ಮತ್ತೊಂದು ಹೆಸರೇ ಪುನೀತ್ ರಾಜಕುಮಾರ್ ಆಗಿದ್ದಾರೆ. ಅವರು ಬದುಕಿದ್ದಾಗ ಅವರ ಯಾವ ಸೇವೆಗಳು ಬೆಳಕಿಗೆ ಬರಲಿಲ್ಲ. ಅಂದರೆ, ಪ್ರಚಾರ ಪಡೆಯದೇ ಅವರು ಗೌಪ್ಯವಾಗಿ ತಮ್ಮ ಸೇವಾಕಾರ್ಯದಲ್ಲಿ ಸಕ್ರಿಯರಾಗಿದ್ದರು. ಪುನೀತ್ ಅವರು ನಿಧನರಾದ ಬಳಿಕ ಅವರ ಎಲ್ಲಾ ಸೇವಾ ಕಾರ್ಯಗಳು ಬೆಳಕಿಗೆ ಬಂದು ಈಗ ದೇವರ ಸ್ಥಾನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಗಂಧದ ಗುಡಿ ಫೌಂಡೇಷನ್ ಮುಖ್ಯಸ್ಥರಾದ ಆರ್ಯನ್, ರತನ್ ಚಿಕ್ಕು, ಆದಿ ಎಲ್ಲರೂ ಸೇರಿ ಪುನೀತ್ ಅವರ ಸೇವಾ ಕಾರ್ಯವನ್ನು ಮುಂದುವರಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸೌಂಡ್ ಟ್ರೀ ಸಂಸ್ಥೆಯವರಿಂದ ಶಾಲಾ ಮಕ್ಕಳಿಗೆ ಕಿವಿ ಮತ್ತು ಗಂಟಲು ತಪಾಸಣೆ ನಡೆಸಲಾಯಿತು. ಒಂದು ತಿಂಗಳ ಕಾಲ ಈ ವಿಧ್ಯಾರ್ಥಿಗಳಿಗೆ ಉಚಿತವಾಗಿ ತಪಾಸಣೆ ಮಾಡಲಾಗುವುದು ಎಂದು ವೈದ್ಯರಾದ ಡಾ.ಪೂಜಾ ಮತ್ತು ಡಾ.ಪವನ್ ಹೇಳಿದರು. ಗಂಧದ ಗುಡಿ ಫೌಂಡೇಷನ್‍ನ ರತನ್ ಚಿಕ್ಕು ಮಾತನಾಡಿ, ಪುನೀತ್ ರಾಜಕುಮಾರ್ ತಾವು ಬದುಕಿದ್ದಾಗ ಮೈಸೂರಿನ ಶಕ್ತಿಧಾಮ ಸೇರಿದಂತೆ ರಾಜ್ಯದ ಹಲವಾರು ವೃದ್ಧಾಶ್ರಮಗಳಿಗೆ ನೆರವು ನೀಡಿದ್ದಾರೆ. ಜತೆಗೆ ನೂರಾರು ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಮಕ್ಕಳೆಂದರೆ ಅವರಿಗೆ ಪಂಚ ಪ್ರಾಣವಾಗಿತ್ತು. ಈ ನಿಟ್ಟಿನಲ್ಲಿ ನಾವೂ ಕೂಡ ಇಂದು ಅವರ ಸ್ಮರಣಾರ್ಥ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದ್ದೇವೆ. ಜತೆಗೆ ಮಕ್ಕಳಲ್ಲೂ ಪುನೀತ್ ಅವರ ಸೇವಾ ಮನೋಭಾವನೆ ಮೂಡಿಸಲು ಗಂಧದ ಗುಡಿ ಚಲನ ಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿದ್ದೇವೆ ಎಂದರು.
ಆರೋಗ್ಯ ತಪಾಸಣೆ ಬಳಿಕ ಸುಮಾರು 100ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಚಲನ ಚಿತ್ರದ ಉಚಿತ ವೀಕ್ಷಣೆಗೆ ಗಂಧದ ಗುಡಿ ಫೌಂಡೇಷನ್ ವತಿಯಿಂದ ಅವಕಾಶ ಮಾಡಿಕೊಡಲಾಯಿತು. ಬಿಜೆಪಿ ಯುವ ಮುಖಂಡರಾದ ಮಿಥುನ್ ಶಿವರಾಮ್, ಆರ್‍ಜೆ ಸುನೀಲ್, ಆರ್‍ಜೆ ಆದರ್ಶ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು