10ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ : ರೊಚ್ಚಿಗೆದ್ದ ರೈತರಿಂದ ಜನ ಪ್ರತಿನಿಧಿಗಳ ಅಣುಕು ಶವಯಾತ್ರೆ
ನವೆಂಬರ್ 09, 2022
ಮೈಸೂರು : ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಬ್ಬು ಬೆಳಗಾರರು ನಡೆಸುತ್ತಿರುವ ಅಹೋ ರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದ್ದು, ತಮಗೆ ಸ್ಪಂದಿಸಿದ ಜನ ಪ್ರತಿನಿಧಿಗಳ ಅಣುಕು ಶವಯಾತ್ರೆ ನಡೆಸಿ ರೈತರು ತಮ್ಮ ಆಕ್ರೋಶ ಹೊರ ಹಾಕಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಣುಕು ಶವಯಾತ್ರೆಯು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟು ಮಹಾರಾಣಿ ಕಾಲೇಜ್ ಮೂಲಕ ಮೆಟ್ರೋ ಪೋಲ್ ಸರ್ಕಲ್ ಸುತ್ತಿ ಮತ್ತೇ ಜಿಲ್ಲಾಧಿಕಾರಿಗಳ ಕಚೇರಿಗೆ ತರಲಾಯಿತು. ಈ ವೇಳೆ ಶವಯಾತ್ರೆಯಲ್ಲಿ ಪಾಲ್ಗೊಂಡ ರೈತರು, ಮಂತ್ರಿಗಳು, ಶಾಸಕರು, ಸಂಸದರು ರೈತರ ಪಾಲಿಗೆ ಸತ್ತಿದ್ದಾರೆ. ನೀವೆ ಇವರ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಅಣುಕು ಶವವನ್ನು ಜಿಲ್ಲಾಧಿಕಾರಿ ಕಚೇರಿ ಮುಂದಿಟ್ಟು ಹಂಗಿಸಿದರು. ಹೊರ ರಾಜ್ಯಗಳಲ್ಲಿ ಟನ್ ಕಬ್ಬಿಗೆ 4,500 ರೂ. ನೀಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಬ್ಬು ಕಟಾವು, ಸಾಗಾಣಿಕೆ ವೆಚ್ಚ ಕಳೆದು ಕೇವಲ 1,500 ರೂ. ಮಾತ್ರ ರೈತರಿಗೆ ಉಳಿಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ಚುನಾಯಿತ ಪ್ರತಿನಿಧಿಗಳು ಸಕ್ಕರೆ ಕಾರ್ಖಾನೆ ಮಾಲಿಕರ ಪರವಾಗಿದ್ದು, ರೈತರ ನೆರವಿಗೆ ಬಾರದೆ ಅನಾಥ ಶವದಂತಿದ್ದಾರೆ ಎಂದು ಕಿಡಿ ಕಾರಿದರು. ಪ್ರತಿಭಟನೆಯಲ್ಲಿ ಸಂಘದ ಕಾರ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಹಾಡ್ಯರವಿ, ಕುರಬೂರು ಸಿದ್ದೇಶ್, ಪಟೇಲ್ ಶಿವಮೂರ್ತಿ, ಮೂಕಹಳ್ಳಿ ಮಹದೇವಸ್ವಾಮಿ, ಹಾಲಿನ ನಾಗರಾಜ್, ಉಡಿಗಾಲ ಮಂಜುನಾಥ್, ಗುರು, ಮಲ್ಲಪ್ಪ, ರೇವಣ್ಣ, ಮಹದೇವಸ್ವಾಮಿ, ರಾಜು, ಸುಧಾಕರ್, ಶಿವು, ಮಲಿಯೂರು ಬಸವರಾಜಪ್ಪ, ಹರ್ಷಕುಮಾರ್, ಕಾಳಪ್ಪ, ನಂಜುಂಡ ನಾಯಕ, ಮಲ್ಲೇಗೌಡ, ಮಂಜುನಾಥ, ಮಾದಪ್ಪ, ಕನಕಹಳ್ಳಿ ಬಸವಣ್ಣ, ಕಿರಗಸೂರು ಶಂಕರ್, ಪ್ರಸಾದ್ ನಾಯಕ, ಚುಂಚರಾಯನ ಹುಂಡಿ ಸಿದ್ದರಾಮಯ್ಯ, ನಂಜುಂಡಸ್ವಾಮಿ, ರಾಜಣ್ಣ, ಮಾರ್ಬಳ್ಳಿ ನೀಲಕಂಠಪ್ಪ ಇನ್ನು ಮುಂತಾದವರು ಇದ್ದರು.
0 ಕಾಮೆಂಟ್‌ಗಳು