ಮೈಸೂರು : ದೇಶದಲ್ಲಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಬಲವಾಗಿ ಇರುವ ಕಡೆ ಬಿಜೆಪಿಯ ಆಟ ನಡೆಯುತ್ತಿಲ್ಲ. ಆದರೆ, ಕರ್ನಾಟದಲ್ಲೂ ಕೂಡ ಪ್ರಾದೇಶಿಕ ಪಕ್ಷ ಇದ್ದರೂ ಅದು ಬಿಜೆಪಿ ಜತೆ ಸೇರಿಕೊಂಡಿದೆ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟೂ ಪರೋಕ್ಷವಾಗಿ ಜೆಡಿಎಸ್ ಪಕ್ಷವನ್ನು ಕುಟುಕಿದರು.
ಮೈಸೂರು ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಮೈಸೂರಿನ ವಿಚಾರವಾದಿ ಬಳಗ ಏರ್ಪಡಿಸಿದ್ದ ಡಾ.ಹರೀಶ್ ಕುಮಾರ್ ಬರೆದಿರುವ ``ಸಿದ್ಧರಾಮಯ್ಯ 75 ಸಮಾಜವಾದಿ-ಜನನಾಯಕನ-ಜೀವನ-ಸಿದ್ಧಾಂತ-ಸಾಧನೆ’’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಮನೆಗಳಲ್ಲಿ ಟಿವಿ ಆನ್ ಮಾಡಿದರೆ ಸಾಕು ಎಲ್ಲ ಚಾನಲ್‍ಗಳಲ್ಲೂ ಸಿದ್ದರಾಮಯ್ಯ ಅವರನ್ನು ತೆಗಳುವುದೇ ಕಂಡುಬರುತ್ತದೆ. ಪತ್ರಿಕೆಗಳಲ್ಲೂ ಅದೇ ಕತೆ. ಇಂದು ಯಾರೂ ಕೂಡ ಸಿದ್ದರಾಮಯ್ಯ ಅವರನ್ನು ನೀವು ನುಡಿದಂತೆ ನಡೆದಿಲ್ಲ. ನೀವೊಬ್ಬ ಜಾತಿವಾದಿ, ನೀವು ಭ್ರಷ್ಟಾಚಾರಿ, ನಿಮಗೆ ಸ್ಥದ್ಧಾಂತಿಕ ಸ್ಪಷ್ಟತೆ ಇಲ್ಲ, ಅಭಿವೃದ್ಧಿಯ ಮುನ್ನೋಟ ಇಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ. ಇದನ್ನು ನಾನು ಸವಾಲು ಎಂದೇ ಹೇಳುತ್ತೇನೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರ ಕಚೇರಿಯಲ್ಲಿ ಅವರ ಸಮುದಾಯಕ್ಕೆ ಸೇರಿದ ಯಾವೊಬ್ಬ ಅಧಿಕಾರಿಯೂ ಇರಲಿಲ್ಲ. ಕ್ಯಾಬಿನೆಟ್‍ನಲ್ಲೂ ಸಮುದಾಯಕ್ಕೆ ಹೆಚ್ಚಿನ ಅವಕಾಶ ಇರಲಿಲ್ಲ.
ಇತ್ತೀಚೆಗೆ ಕುರುಬ ಸಮುದಾಯವನ್ನು ಎಸ್‍ಟಿ ಗೆ ಸೇರಿಸಿ ಎಂಬುದಾಗಿ ಕುರುವ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಮುದಾಯದ ಹೋರಾಟವನ್ನು ಸಿದ್ದರಾಮಯ್ಯ ಬೆಂಬಲಿಸಿದರೂ ಅದೊಂದು ರಾಜಕೀಯ ಪ್ರೇರಿತ ಎಂದು ಅಥೈಸಿಕೊಂಡು ಅದರ ಒಳ ಸುಳಿವು ತಿಳಿದು ಹೋರಾಟದ ಸ್ಥಳಕ್ಕೆ ಅವರು ಹೋಗಲಿಲ್ಲ. ಆದಾಗ್ಯೂ ಆ ಸಮುದಾಯ ಇಂದು ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಂತಿದೆ.
ದೇಶದಲ್ಲಿ ಯಾವುದಾದರೂ ಒಂದು ಪಕ್ಷ ಅಥವಾ ಒಂದು ಸರ್ಕಾರ ತಾನು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಪ್ರಣಾಳಿಕೆಯ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸಿದ್ದೇವೆ ಎನ್ನುವುದಾದರೇ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇದು ಇಲ್ಲ ಎಂದು ದಾಖಲೆ ನೀಡಿದರೆ ನಾನು ನಾಳೆಯಿಂದಲೇ ಬರೆಯುವುದನ್ನು ನಿಲ್ಲಿಸುತ್ತೇನೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಸರ್ಕಾರದ 168 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಜತೆಗೆ ಪ್ರಣಾಳಿಕೆಯಲ್ಲಿ ಇಲ್ಲದ ಹಲವಾರು ಯೋಜನೆಗಳನ್ನೂ ಜಾರಿ ಮಾಡಲಾಗಿದೆ ಎಂದರು.
ಕೆಂಪೇಗೌಡರ ಪ್ರತಿಮೆ ನಿರ್ಮಿಸಿರುವ ಬಿಜೆಪಿ ಸರ್ಕಾರ ಕೆಂಪೇಗೌಡರ ಮಾದರಿಯ ಆಡಳಿತವನ್ನು ನೀಡದೆ, ಗುಜರಾತ್ ಮಾದರಿ, ಯುಪಿ ಮಾದರಿ ಆಡಳಿತ ನೀಡುತ್ತೇವೆ ಎನ್ನುತ್ತಾರೆ. ಆದರೆ, ಸಿದ್ದರಾಮಯ್ಯ ಲಿಂಗಾಯತರಲ್ಲದಿದ್ದರೂ ಅಧಿಕಾರ ವಹಿಸಿಕೊಂಡಾಗ ಬಸವಣ್ಣನವರ ಆಡಳಿತ ನೀಡುತ್ತೇವೆಂದು ಹೇಳಿ ಅದೇ ರೀತಿ ಅಧಿಕಾರ ನಡೆಸಿದರು ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ 23 ಜನರ ಹತ್ಯೆಯಾಯಿತು ಎಂದು ಶೋಭಾ ಕರಂದ್ಲಾಜೆ ಮತ್ತು ಪ್ರತಾಪ್ ಸಿಂಹ ರಾಜನಾಥ್ ಸಿಂಗ್ ಅವರಿಗೆ ವರದಿ ಕೊಟ್ಟರು. ಅದರಲ್ಲಿ ಅಶೋಕ್ ಪೂಜಾರಿ ಎಂಬವನು ಬದುಕಿದ್ದರೂ ವರದಿಯಲ್ಲಿ ಸತ್ತಿದ್ದಾನೆ ಎಂದು ಹೇಳಲಾಯ್ತು. ಈ 23 ಜನರಲ್ಲಿ 12 ಮಂದಿ ಹಿಂದೂಗಳು 11 ಜನ ಮುಸಲ್ಮಾನರು. 12 ಜನ ಹಿಂದೂಗಳ ಹತ್ಯೆಯಲ್ಲಿ ವಿನಯ್ ಕುಲಕರ್ಣಿ ಅವರ ಮೇಲೆ ಒಂದು ಆರೋಪ ಬಿಟ್ಟರೆ ಉಳಿದವರ ಕೊಲೆ ಆರೋಪ ಇರುವುದು ಪಿಎಫ್‍ಐ ಮತ್ತು ಎಸ್‍ಡಿಪಿಐ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಪಕ್ಷದವರ ಮೇಲಲ್ಲ. ಆದರೆ ಎಲ್ಲಾ ಮುಸ್ಲೀಮರ ಕೊಲೆ ಆರೋಪಗಳಿರುವುದು 8 ಭಜರಂಗ, 1 ಹಿಂದೂ ಜಾಗರಣ ವೇದಿಕೆ, 1 ಶ್ರೀರಾಮ ಸೇನೆ 1 ವಿಹೆಚ್‍ಪಿ ಕಾರ್ಯಕರ್ತರು ಇದ್ದಾರೆ.
ರಾಮಲಿಂಗಾರೆಡ್ಡಿ ಇದನ್ನು ಪುಸ್ತಕವನ್ನೇ ಮಾಡಿದ್ದಾರೆ.
ಈ ಸತ್ಯವನ್ನು ಬಿಜೆಪಿ ಹೇಳುವುದಿಲ್ಲ. ಕೇವಲ ಸುಳ್ಳುಗಳನ್ನು ಹೇಳಿ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸುತ್ತಿದೆ ಎಂದರು.
ಡಾ.ಹರೀಶ್ ಕುಮಾರ್ ಬರೆದಿರುವ ಈ ಪುಸ್ತಕದಲ್ಲಿ ವಿಶ್ಲೇಷಣೆ ಕಡಿಮೆ ಇದ್ದರೂ ಸತ್ಯ ಘಟನೆಗಳು ಹೆಚ್ಚಾಗಿವೆ. ಕರೋನಾ ಕಷ್ಟದಲ್ಲಿ ಅನ್ನಭಾಗ್ಯ ಯೋಜನೆಯಿಂದಲೇ ಜನ ಬದುಕಿದ್ದರು ಎನ್ನುವುದು ಈ ರಾಜ್ಯದ ಜನರು ಒಪ್ಪಿಕೊಂಡಿರುವುದು ಸತ್ಯ. ಸೈದ್ಧಾಂತಿಕ ಸ್ಪಷ್ಟತೆ ಇರುವುದು ಸಿದ್ಧರಾಮಯ್ಯ ಅವರ ದೊಡ್ಡ ಗುಣ.
ಇತಿಹಾಸ ಸಿದ್ದರಾಮಯ್ಯ ಅವರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಎಂಎಲ್‍ಸಿ ಡಾ.ಡಿ.ತಿಮ್ಮಯ್ಯ, ಪ್ರಗತಿಪರ ಚಿಂತಕ ಪ.ಮಲ್ಲೇಶ್, ಖ್ಯಾತ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಲೇಖಕ ಡಾ ಹರೀಶ್ ಕುಮಾರ್, ಕೆ.ಎಸ್.ಶಿವರಾಮು ಇನ್ನಿತರರು ಇದ್ದರು.
ಜಾತಿ ಆಧಾರಿತ ಮೀಸಲಾತಿ ರದ್ದಾಗುವ ಅಪಾಯ
ಬಿಜೆಪಿ ಮತ್ತೊಂದು ಬಾರಿ ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಮೀಸಲಾತಿ ರದ್ದಾಗುವ ಅಪಾಯವಿದೆ. ಅವರು ಸಂವಿಧಾನವನ್ನು ಬದಲಾಯಿಸುವುದಿಲ್ಲ. ಅದನ್ನು ದುರ್ಬಲ ಮಾಡುತ್ತಾರೆ.ಈಗೆಲ್ಲಾ ಬಿಜೆಪಿಯನ್ನು ಬೈಯುವ ಜನರು ಚುನಾವಣೆ ವೇಳೆ ಹಿಂದೂ ಮುಸ್ಲಿಂ ಮಂದಿರ ಮಸೀದಿ ಮಾತಿಗೆ ಮರುಳಾಗಬಾರದು. ಸಿದ್ದರಾಮಯ್ಯ ಅವರು ಒಂದು ಟ್ವೀಟ್ ಮಾಡಿದರೆ ಬಿಜೆಪಿಯ ನೂರಾರು ಜನ ಟ್ರೋಲ್ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುವುದಿಲ್ಲ. ಇದೂ ಕೂಡ ಪಕ್ಷದ ಒಂದು ವೀಕ್‍ನೆಸ್.
0 ಕಾಮೆಂಟ್‌ಗಳು