ನಂಜನಗೂಡಿನಿಂದಲೇ ಸ್ಪರ್ಧೆ? ಡಾ.ಹೆಚ್.ಸಿ.ಮಹದೇವಪ್ಪ ಸುಳಿವು : ಖರ್ಗೆ ಸ್ವಾಗತಕ್ಕೆ ಭರ್ಜರಿ ಸಿದ್ಧತೆ : ಹೆಚ್ಚಿನ ಜನ ಆಗಮಿಸಬೇಕೆಂದು ಕರೆ
ನವೆಂಬರ್ 03, 2022
ಮೈಸೂರು : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಐವತ್ತು ವರ್ಷಗಳ ನಂತರ ಕನ್ನಡಿಗರೊಬ್ಬರು ಎಐಸಿಸಿ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಷಯ. ಅವರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಮಾರಂಭಕ್ಕೆ ಆಗಮಿಸಬೇಕೆಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಗುರುವಾರ ನಂಜನಗೂಡಿಗೆ ಆಗಮಿಸಿದ್ದ ಅವರು, ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ನಂತರ ನ.6 ರಂದು ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಖರ್ಗೆ ಅವರ ಸ್ವಾಗತ ಸಮಾರಂಭಕ್ಕೆ ಮೈಸೂರು-ಚಾಮರಾಜನಗರ ಜಿಲ್ಲೆ ಸೇರಿದಂತೆ ನಂಜನಗೂಡಿನಿಂದ ಅತೀ ಹೆಚ್ಚು ಜನ ರಾಜದಾನಿಗೆ ಆಗಮಿಸಬೇಕು. ಖರ್ಗೆಯವರು ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕರು, ಅಜಾತ ಶತ್ರು, ನಿಜಲಿಂಗಪ್ಪ ಅವರ ನಂತರ ಕನ್ನಡಿಗರಿಗೆ ಈ ಭಾಗ್ಯ ಸಿಕ್ಕಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದೆ. ಕೋಮುವಾದ ಮತ್ತು ಮತೀಯವಾದವನ್ನು ಹಿಂದಿಕ್ಕಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕಾದರೆ ನಾವೆಲ್ಲರೂ ಮಲ್ಲಿಕಾರ್ಜುನ ಖರ್ಗೆ ಅವರ `ಕೈ'ಯನ್ನು ಬಲಪಡಿಸಬೇಕು ಎಂದು ಹೇಳಿದರು. ಹಲವಾರು ಭರವಸೆಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಯಾವ ಭರವಸೆಗಳನ್ನು ಈಡೇರಿಸದೆ ಸರ್ವಾಧಿಕಾರಿ ಮನೋಭಾವ ತೋರಿದೆ. ಕಾಂಗ್ರೆಸ್ ಎಂದರೆ ಹೋರಾಟ, ಚಳವಳಿ ಎಂದರ್ಥ, ಬಿಜೆಪಿಯನ್ನು ಹಿಮ್ಮೆಟ್ಟಿಸಲು ನಾವೆಲ್ಲ ಒಂದಾಗಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂದರು.
`ನೀವು ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ಸ್ಪರ್ಧೆ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಯಾರು ಅಭ್ಯರ್ಥಿ ಆಗಬೇಕು ಎಂದು ನಿರ್ಧರಿಸಬೇಕಾದದ್ದು ಪಕ್ಷದ ಹೈಕಮಾಂಡ್, ನಾನಾಗಲಿ ಅಥವಾ ಬೇರೆ ಯಾರೇ ಆಗಲಿ ಕಾಂಗ್ರೆಸ್ ಅಭ್ಯರ್ಥಿ ಆದರೆ ಅವರನ್ನು ಬೆಂಬಲಿಸಬೇಕಾದದ್ದು ನಮ್ಮ ಕರ್ತವ್ಯ, ಪಕ್ಷದ ಹೈಕಮಾಂಡ್ ಬಯಸಿದರೆ ನಾನೂ ಸಹ ಅಭ್ಯರ್ಥಿ ಆಗಬಹುದು ಎಂದರು'
0 ಕಾಮೆಂಟ್‌ಗಳು