ಮೀಸಲಾತಿ ವಿಷಯದಲ್ಲಿ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತಳ ಸಮುದಾಯವನ್ನು ವಂಚಿಸುತ್ತಿವೆ : ಕೆ.ಎಸ್.ಶಿವರಾಮು

ಮೈಸೂರು : ಪ್ರಸ್ತುತ ಮೀಸಲಾತಿಯ ಆಶಯಕ್ಕೆ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸರ್ಕಾರ ಮೀಸಲಾತಿ ವಂಚಿಸುವ ಹುನ್ನಾರ ನಡೆಸಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಆರೋಪಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಸಾಮಾಜಿಕ ವ್ಯವಸ್ಥೆಯೊಳಗೆ ಆಳವಾಗಿ ಬೇರು ಬಿಟ್ಟಿರುವ ಜಾತಿ ಹಾಗೂ ಅದರ ಪರಿಣಾಮದ ಕಾರಣ ಅಸಮಾನತೆಯುಂಟಾಗಿದೆ. ಜೊತೆಗೆ ತಾರತಮ್ಯ ನೀತಿ ಮೊದಲಾದ ಸಾಮಾಜಿಕ ಪಿಡುಗುಗಳಿವೆ. ಹೀಗಾಗಿ ತಳ ಸಮುದಾಯಗಳ ಶಿಕ್ಷಣ ಮತ್ತು ಆರ್ಥಿಕ ಪ್ರಗತಿಗೆ ಇವು ಕಂಟಕವಾಗಿರುವುದನ್ನು ಮನಗಂಡು ಮೀಸಲಾತಿ ಎಂಬ ಪರಿಕಲ್ಪನೆ ಜಾರಿಗೆ ತರಲಾಗಿದೆ.
ಆದರೆ, ಈ ಹಿಂದೆ ಮೀಸಲಾತಿ ಯಾರಿಗೂ ನೀಡಬಾರದೆಂದು ಹೋರಾಟ, ಹಿಂಸಾಚಾರಕ್ಕೆ ಕಾರಣರಾದವರೇ ಈಗ ಮೀಸಲಾತಿಯನ್ನು ಮುಗಿಬಿದ್ದು, ಪಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರ 103 ನೇ ತಿದ್ದುಪಡಿ ತರುವ ಮೂಲಕ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. ನಾಲ್ಕರಿಂದ ಐದರಷ್ಟಿರುವ ಸಮುದಾಯಗಳಿಗೆ ಆರ್ಥಿಕವಾಗಿ ಹಿಂದುಳಿದಿರುವ ಕಾರಣ ನೀಡಿ ಶೇ. 10 ಮೀಸಲಾತಿ ನೀಡಿದೆ. ಹೀಗಾಗಿ ಇತರ ಹಿಂದುಳಿದ ವರ್ಗಗಳಿಗೂ ಕೂಡ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿ ಪಡಿಸುವ ಹೊಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲಿದೆ ಎಂದರು.
ಒಂದು ವೇಳೆ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು 2-ಎ ವರ್ಗಕ್ಕೆ ಶೇ.15 ರಿಂದ 27ಕ್ಕೆ ಹೆಚ್ಚಿಸಬೇಕು. ಪ್ರವರ್ಗ-1 ಅಡಿಯಲ್ಲಿ ಬರುವ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ ಶೇ. 9ಕ್ಕೆ ಹೆಚ್ಚಿಸುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕು. ಇಲ್ಲದಿದ್ದಲ್ಲಿ ವರ್ಗ ಸಂಘರ್ಷ ಉಂಟಾಗಬಹುದಾಗಿದೆ ಎಂದು ಎಚ್ಚರಿಸಿದರು.
ಡಿ. ನಾಗಭೂಷಣ್, ಎನ್.ಆರ್. ನಾಗೇಶ್, ರವಿನಂದನ್, ಯೋಗೀಶ್ ಉಪ್ಪಾರ್, ಮೊಗಣ್ಣಾಚಾರ್, ಲೋಕೇಶ್‍ಕುಮಾರ್ ಮಾದಾಪುರ, ಹರೀಶ್ ಮೊಗಣ್ಣ, ಎಚ್. ಪ್ರಕಾಶ್ ಹಾಜರಿದ್ದರು.