ಶಾಸಕ ಸಿ.ಎಸ್.ಪುಟರಾಜು ನೇತೃತ್ವದಲ್ಲಿ ಪಾಂಡವಪುರದಲ್ಲಿ ಮೂರು ದಿನಗಳ ``ಅಪ್ಪು ನಮನ’’ ಕಾರ್ಯಕ್ರಮ : ಡಾ.ರಾಜ್ ಕುಟುಂಬ ಭಾಗಿ

-ನಜೀರ್ ಅಹಮದ್, ಪಾಂಡವಪುರ

ಪಾಂಡವಪುರ : ನವೆಂಬರ್, 25, 26, 27 ರಂದು ಮೂರು ದಿನಗಳ ಕಾಲ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಹೆಸರಾಂತ ನಟ ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ನೆನಪಲ್ಲಿ ``ಅಪ್ಪು ನಮನ’’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಾ.ರಾಜ್ ಕುಮಾರ್ ಕುಟುಂಬದವರು ಭಾಗವಹಿಸಲಿದ್ದಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಡಾ.ರಾಜ್ ನಮಗೆ ಆದರ್ಶ ವ್ಯಕ್ತಿ. ನಾವೆಲ್ಲರೂ ಅವರ ಚಲನಚಿತ್ರಗಳನ್ನು ನೋಡಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಕ್ಕೆ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಒಂದೇ ಕುಟುಂಬದ ಇಬ್ಬರು ಸುಪುತ್ರರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದ್ದು ಒಂದು ದಾಖಲೆ ಎಂದರು.

ಪುನೀತ್ ಅವರು ಅಪಾರ ಜನಪ್ರಿಯತೆ ಗಳಿಸಿದ ಕನ್ನಡ ಚಿತ್ರರಂಗದ ನಾಯಕ ನಟರು. ಅವರ ಅಕಾಲಿಕ ನಿಧನ ನಾಡಿನ ಜನತೆಗೆ ಸಾಕಷ್ಟು ನೋವುಂಟು ಮಾಡಿದೆ. ಅಪ್ಪು ಅವರು ಮಾಡಿದ ಹಲವಾರು ಪುಣ್ಯದ ಕೆಲಸಗಳು ಅವರ ನಿಧನದ ನಂತರ ಬೆಳಕಿಗೆ ಬಂದವು. ಅಂತಹ ಮಹಾನ್ ವ್ಯಕ್ತಿಗೆ ನಮನ ಸಲ್ಲಿಸುವ ಉದ್ದೇಶದಿಂದ ಪಾಂಡವಪುರದಲ್ಲಿ `ಅಪ್ಪು ನಮನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೂರು ದಿನಗಳ ಕಾಲ ನಡೆಯುವ ಅಪ್ಪು ನಮನ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಚಿತ್ರ ನಿರ್ದೇಶಕ ಹರ್ಷ ಮಾಡುತ್ತಿದ್ದಾರೆ. ಈಗಾಗಲೆ ಅಪ್ಪು ಕುಟುಂಬದ ಎಲ್ಲರ ಒಪ್ಪಿಗೆ ಪಡೆದುಕೊಂಡಿದ್ದು ಡಾ.ಶಿವರಾಜ್‍ಕುಮಾರ್ ಸೇರಿದಂತೆ ಅವರ ಕುಟುಂಬಸ್ಥರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅನನ್ಯ ಭಟ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯಪ್ರಕಾಶ್ ಅವರ ತಂಡಗಳಿಂದ ಸಂಗೀತ ಕಾರ್ಯಕ್ರಮ, ಜಗ್ಗಪ್ಪ ತಂಡದ ಕಾಮಿಡಿ ಕಾರ್ಯಕ್ರಮ ಹಾಗೂ ರಾಜ್ಯದ ಹಲವು ನಟ-ನಟಿಯರಿಂದ ನೃತ್ಯ ಪ್ರದರ್ಶನವು ಸಹ ಇರಲಿದೆ. ಜತೆಗೆ ಇದೇ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪುರಸ್ಕøತ ಕನಗನಮರಡಿ ಪ್ರೊ.ಕೃಷ್ಣೇಗೌಡರಿಗೆ ಅಭಿನಂದನೆ ಸಲ್ಲಿಸಲಾಗುವುದು. 

ಮೊದಲ ದಿನದ ಕಾರ್ಯಕ್ರಮದಲ್ಲಿ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಒಂದು ಸಾವಿರ ಹೆಣ್ಣು ಮಕ್ಕಳಿಂದ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

 ಸಭೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್, ಜೆಡಿಎಸ್ ಪ್ರಭಾರ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮನ್ಮುಲ್ ಅಧ್ಯಕ್ಷ ರಾಮಚಂದ್ರು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಯಶವಂತ್ ಕುಮಾರ್,  ಪುರಸಭೆ ಅಧ್ಯಕ್ಷೆ ಅರ್ಚನಚಂದ್ರು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಜಿಪಂ ಮಾಜಿ ಸದಸ್ಯ ಎಚ್.ಎಲ್.ಶಿವಣ್ಣ, ಮುಖಂಡರಾದ ಟೌನ್ ಚಂದ್ರು, ಎಚ್.ಎಲ್.ನಂಜೇಗೌಡ, ಪಿ.ಎಸ್.ಲಿಂಗರಾಜು, ತಿರುಮಲಾಪುರ ಗೋಪಾಲ್, ದ್ಯಾವಪ್ಪ, ಎಸ್ಸಿಎಸ್ಟಿ ವಿಭಾಗದ ಅಧ್ಯಕ್ಷ ಬೊಮ್ಮರಾಜು ಸೇರಿದಂತೆ ಹಲವರು ಹಾಜರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು