ಕಾಡಂಚಿನ ಸರ್ಕಾರಿ ಶಾಲೆಯ 300 ಮಕ್ಕಳಿಗೆ ಸ್ವಂತ ಹಣದಲ್ಲಿ ಸಮವಸ್ತ್ರ ವಿತರಿಸಿದ ವಿಕಲಚೇತನ ಸೆಸ್ಕ್ ಎಂಜಿನೀಯರ್ ರಂಗಸ್ವಾಮಿ

-ಶಾರುಕ್ ಖಾನ್, ಹನೂರು

ಹನೂರು : ಎರಡೂ ಕಾಲುಗಳ ಅಂಗವೈಕಲ್ಯ ಹೊಂದಿರುವ ವಿಕಲ ಚೇತನ ಸೆಸ್ಕ್ ಎಂಜಿನೀಯರ್ ರಂಗಸ್ವಾಮಿ ಎಂಬವರು ಇಂದು ತಮ್ಮ ಸ್ವಂತ ಹಣದಲ್ಲಿ 300ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ, ಟೈ, ಬೆಲ್ಟ್ ವಿತರಿಸಿ ಮಾನವೀಯತೆ ಮರೆದಿದ್ದಾರೆ.

ತಾಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಾದ ದೊಮ್ಮೆಗೌಡನ ದೊಡ್ಡಿ, ಯರಂಬಾಡಿ, ಗಾಜನೂರು ಮತ್ತು ಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ರಂಗಸ್ವಾಮಿ ಶನಿವಾರ ಸಮವಸ್ತ್ರ, ಟೈ, ಬೆಲ್ಟ್, ಐಡಿ ಕಾರ್ಡ್ ವಿತರಿಸಿ ಇತರರಿಗೆ ಮಾದರಿಯಾದರು. 
ಕಳೆದ ಆಗಸ್ಟ್, 15 ರಂದು ಆಕಸ್ಮಿಕವಾಗಿ ಈ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಕ್ಕಳ ಬಟ್ಟೆಗಳನ್ನು ನೋಡಿ ಮಕ್ಕಳ ಪೋಷಕರ ಆರ್ಥಿಕ ಸ್ಥಿತಿಗತಿಗಳನ್ನು ತಿಳಿದು. ಅವರಿಗೆ ಸಹಾಯ ಮಾಡುವ ಉದ್ಧೇಶದಿಂದ ತಮ್ಮ ಸ್ವಂತ ಹಣದಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಣೆ ಮಾಡಿದ್ದಾರೆ ಎನ್ನಲಾಗಿದೆ.

ರಂಗಸ್ವಾಮಿ ಹನೂರು ಉಪವಿಭಾಗ ಸಹಾಯಕ ಇಂಜಿನೀಯರ್ ಆಗಿದ್ದು, ಬಹುತೇಕ ಬಡವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಕಾರಣ ಅವರಿಗೆ ತಮ್ಮ ಕೈಲಾದ ಸೇವೆ ಮಾಡುವ ಸದುದ್ಧೇಶ ಹೊಂದಿದ್ದಾರೆ ಎಂದು ಶಾಲೆಯ ಶಿಕ್ಷಕರು ತಿಳಿಸಿದರು.  



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು