ಚೀಟಿ ವ್ಯವಹಾರದಿಂದ ಆರ್ಥಿಕ ಸಂಕಷ್ಟ: ಪ್ರೌಢಶಾಲೆ ಶಿಕ್ಷಕ ಶಂಭುಲಿಂಗ ಆತ್ಮಹತ್ಯೆ

 ಮೈಸೂರು : ನಂಜನಗೂಡು ತಾಲ್ಲೂಕು ಕುಡ್ಲಾಪುರ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಶಂಭುಲಿಂಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂಜನಗೂಡು ರಾಮಸ್ವಾಮಿ ಲೇಔಟ್‍ನಲ್ಲಿ ವಾಸವಾಗಿದ್ದ ಶಂಭುಲಿಂಗ (45) ಗುರುವಾರ ರಾತ್ರಿ 8.30 ಗಂಟೆ ಸಮಯದಲ್ಲಿ ಅವರ ಮನೆಯ ಅನತಿ ದೂರದಲ್ಲಿರುವ ಅವರ ಕಾರ್ ಶೆಡ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೆ ಬೆಳಿಗ್ಗೆ ಪಾರ್ಸೆಲ್ ನೀಡುವ ನೆಪದಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಇವರ ಪತ್ನಿ ದಾಕ್ಷಾಯಿಣಿ ಅವರ ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ದರೋಡೆ ನಡೆಸಿ ಪತ್ನಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಚಿನ್ನಾಭರಣ ನಗದು ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಪದಾರ್ಥಗಳನ್ನು ಕದ್ದೊಯ್ದಿದ್ದರು.
ಸಹ ಶಿಕ್ಷಕ ಶಂಭುಲಿಂಗಸ್ವಾಮಿ ಕಳೆದ 10 ವಷಗಳಿಂದ ಚೀಟಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದು, ತಮ್ಮ ಶಿಕ್ಷಕ ವಲಯದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಮಸ್ಯೆಗೆ ಸಿಲುಕಿದ್ದರು ಎನ್ನಲಾಗಿದೆ. ಜೊತೆಗೆ ಇವರ ಮನೆಯಲ್ಲಿ ದರೋಡೆ ನಡೆದಿದ್ದ ಕಾರಣ ಮತ್ತಷ್ಟು ಆರ್ಥಿಕ ತೊಂದರೆಗೆ ಸಿಲುಕಿದ್ದರು ಎಂದು ತಿಳಿದು ಬಂದಿದೆ.
ಇದರಿಂದ ಮನನೊಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಶಂಭುಲಿಂಗ ಅವರ ಮರಣೋತ್ತರ ಪರೀಕ್ಷೆಯನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ ಅವರ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಯಿತು.
ಮೃತ ಶಂಭುಲಿಂಗ ಪತ್ನಿ, ದಾಕ್ಷಾಯಿಣಿ, ಪುತ್ರಿ ಧಾತ್ರಿಶ್ರೀ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ನಂಜನಗೂಡು ತಾಲ್ಲೂಕು ದೇವಿರಮ್ಮನಹಳ್ಳಿಯ ಅವರ ತೋಟದಲ್ಲಿ ಶುಕ್ರವಾರ ನೆರವೇರಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು