ನಾಯಿ ಅಡ್ಡ ಬಂದು ಕೆಳಕ್ಕೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು

 ಪಾಂಡವಪುರ : ನಾಯಿ ಅಡ್ಡಲಾಗಿ ಬಂದ ಕಾರಣ ಬೈಕ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದ ಸವಾರ ತೀವ್ರ ಪೆಟ್ಟಿನಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಟಿ.ಎಸ್.ಛತ್ರ ಗ್ರಾಮದ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ನಾಗಮಂಗಲ ಟೌನ್ ನಿವಾಸಿ ವೆಂಕಟಪ್ಪ ಅವರ ಮಗ ಎನ್.ವಿ.ಕುಮಾರ (45) ಮೃತಪಟ್ಟವರು.
ಕುಮಾರ ತಮ್ಮ ಬೈಕಿನಲ್ಲಿ ನಾಗಮಂಗಲದಿಂದ ಪಾಂಡವಪುರದ ಕಡೆ ಬರುತ್ತಿದ್ದ ವೇಳೆ ಟಿ.ಎಸ್.ಛತ್ರ ಗ್ರಾಮದ ವೆಂಕಟೇಶ್ವರ ದೇವಸ್ಥಾನದ ಬಳಿ ನಾಯಿಯೊಂದು ಅಡ್ಡಲಾಗಿ ಬಂದ ಕಾರಣ ಕುಮಾರ್ ತಮ್ಮ ಬೈಕಿನ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಬೈಕ್ ರಸ್ತೆಯಲ್ಲಿ ಉರುಳಿಬಿತ್ತು. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಸಿದ್ದಪ್ಪ ಎಂಬ ವ್ಯಕ್ತಿಗೂ ಬೈಕ್ ಡಿಕ್ಕಿ ಹೊಡೆದು ಆತನಿಗೂ ಗಂಭೀರ ಗಾಯಗಳಾದ ಕಾರಣ ಅವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. 
ಅಪಘಾತವಾದ ಕೂಡಲೇ ಸ್ಥಳೀಯರು ಕುಮಾರ್ ಅವರನ್ನು ಆಟೋದಲ್ಲಿ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದರು ಎನ್ನಲಾಗಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು