ಹಕ್ಕುಪತ್ರ ವಂಚಿತ ಅಲೆಮಾರಿಗಳ ಹೋರಾಟಕ್ಕೆ ದಸಂಸ ಒಕ್ಕೂಟ ಬೆಂಬಲ
ವರದಿ-ನಜೀರ್ ಅಹಮದ್, ಪಾಂಡವಪುರ
ಮೈಸೂರು : ದೇಶದ ವರ್ತಮಾನ ಅತ್ಯಂತ ಭೀಕರವಾಗಿದೆ. ಆಂತರಿಕ ಪ್ರಕ್ಷೋಭೆ ಹೆಚ್ಚಾಗಿದ್ದು, ಪರಸ್ಪರರನ್ನು ಎತ್ತಿಕಟ್ಟಿ, ವಿಷಬೀಜವನ್ನು ಬಿತ್ತಿ, ಮನೆ ಮನೆಗಳಲ್ಲೂ ಬೆಂಕಿ ಹಚ್ಚಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ದಲಿತ ಚಳವಳಿಗಳು ಒಂದಾಗದಿದ್ದರೇ ನಮ್ಮ ಮಕ್ಕಳ ಭವಿಷ್ಯ ಅತ್ಯಂತ ರೌರವ ನರಕದ ಸ್ಥಿತಿಗೆ ತಲುಪುತ್ತದೆ. ದಲಿತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ಕನಿಷ್ಠ ಸ್ಕಾಲರ್ ಶಿಪ್ ನೀಡದ ಪ್ರಧಾನಿಯನ್ನು ವಿಶ್ವಗುರು ಎಂದು ಹೊಗಳುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಸಂಚಾಲಕರಾದ ಇಂದೂಧರ ಹೊನ್ನಾಪುರ ಆತಂಕ ವ್ಯಕ್ತಪಡಿಸಿದರು.
ನಗರದ ಟೌನ್ ಹಾಲ್‍ನಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಏರ್ಪಡಿಸಿದ್ದ ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ನಡೆಯುವ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕøತಿಕ ಪ್ರತಿರೋಧ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇದು ಆತ್ಮಾವಲೋಕನ ಸಭೆಯಲ್ಲ, ಯಾರಲ್ಲೂ ಪರಸ್ಪರ ವೈಯುಕ್ತಿಕ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ, ತಪ್ಪನ್ನೂ ಮಾಡಿದ್ದಾರೆ, ಯಾರೋಬ್ಬರನ್ನೂ ದೋಷಣೆ ಮಾಡುವುದು ಬೇಡ. ಯಾವುದೋ ಕಾರಣದಿಂದ ವೈಯುಕ್ತಿಕ ಸಂಘಟನೆ ಕಟ್ಟಿಕೊಂಡಿದ್ದರೂ ಎಲ್ಲರೂ ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನೇ ಆಚರಣೆ ಮಾಡುತ್ತಿದ್ದೂ ಬೇರ್ಯಾರನ್ನೂ ಅನುಸರಿಸಿಲ್ಲ. ವರ್ತಮಾನದಲ್ಲಿ ನಿಂತು ನಮ್ಮ ಮುಂದಿರುವ ಕರಾಳ ಭವಿಷ್ಯವನ್ನು ನೋಡಿ ನಾವೆಲ್ಲಾ ಒಂದಾಗಬೇಕಿದೆ ಎಂದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಈ ಸಮಾವೇಶ ಆಯೋಜಿಸಲಾಗಿದೆ. ಸಾಂಸ್ಕøತಿಕ ಪ್ರತಿರೋಧವಾಗಿ ಸಮಾವೇಶ ನಡೆಯಲಿದೆ. ಜಾತ್ಯಾತೀತ ರಾಜಕಾರಣ ಮಾಡುವವರಿಗೆ ನಮ್ಮ ಬೆಂಬಲ ಎಂದರು.
ಇದಕ್ಕೂ ಮುನ್ನ ನಡೆಸ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ಮುಖಂಡ ಇಂದೂಧರ ಹೊನ್ನಾಪುರ, 1970ರ ನಂತರ ವಿವಿಧ ಬಣಗಳಾಗಿರುವ ದಸಂಸ ಒಂದೇ ಉದ್ದೇಶದೊಂದಿಗೆ ಹೋರಾಟ ನಡೆಸುತ್ತ ಬಂದಿದೆ. ಈಗ ಅನಿವಾರ್ಯವಾಗಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹತ್ತು ಬಣಗಳು ಒಂದಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಬಣಗಳನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ಸಾವಿರಾರು ವರ್ಷಗಳಿಂದ ಇಡೀ ಭಾರತೀಯ ಸಮಾಜವನ್ನು ತುಳಿದು ಆಳಿದ ಬ್ರಾಹ್ಮಣ್ಯ ಮತ್ತೇ ತನ್ನ ಕರಾಳ ಹಿಡಿತ ಸಾಧಿಸುತ್ತಿದೆ. ಜನರನ್ನು ಜಾಗೃತಗೊಳಿಸಿ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ. ಜನಪರ ಚಳವಳಿಗಳು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ದುರ್ಬಲಗೊಳ್ಳದಂತೆ ಕಾಪಾಡಿ ಅವುಗಳಿಗೆ ಶಕ್ತಿ ತುಂಬಬೇಕೆಂದು ತಿಳಿಸಿದರು.
ಮತ್ತೋರ್ವ ಮುಖಂಡ ಡಾ.ಡಿ.ಜಿ.ಸಾಗರ್ ಮಾತನಾಡಿ, ಬೆಂಗಳೂರಿನ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು, ಪ್ರತಿಯೊಬ್ಬ ದಲಿತರು ಇದರಲ್ಲಿ ಪಾಲ್ಗೊಳ್ಳಬೇಕು. ಭಾರತ ಹಸಿವಿನ ಸೂಚ್ಯಾಂಕದಲ್ಲಿ ಕೊನೆಯಲ್ಲಿದೆ. ಈವರೆಗೂ ಉದ್ಯೋಗ ಸೃಷ್ಟಿಗೆ ಅವಕಾಶ ನೀಡದೆ ಕಾಪೆರ್Çರೇಟ್ ಕಂಪನಿಗಳ ಪರವಾದ ನಿಲುವು ತಳೆದ ಸರ್ಕಾರ, ಈಗ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.
ಬಳಿಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶೈಕ್ಷಣಿಕ ಹಕ್ಕನ್ನು ಕಸಿಯಲಾಗುತ್ತಿದೆ. ಎಸ್‍ಸಿಪಿ, ಟಿಎಸ್‍ಪಿ ಹಣ ಕಡಿತ ಮಾಡಲಾಗಿದೆ. ಇಡೀ ದೇಶವೇ ಮತಿಭ್ರಮೆಗೆ ಒಳಗಾದಂತೆ ವರ್ತಿಸುತ್ತಿದೆ. ರೈತರು, ಶೂದ್ರ ಸಮುದಾಯವನ್ನು ಒಳಗೊಂಡು ಐಕ್ಯತಾ ಸಮಾವೇಶ ಮಾಡಲಾಗುತ್ತಿದೆ ಎಂದು ಹೇಳಿದರು.
ಎನ್.ವೆಂಕಟೇಶ್ ಮಾತನಾಡಿ, ಬಿಜೆಪಿ ಮತ್ತು ಸಂಘ ಪರಿವಾರ ನ್ಯಾಯಾಂಗ ಮತ್ತು ಸಂವಿಧಾನತ್ಮಾಕ ಸಂಸ್ಥೆಗಳನ್ನು ದುರ್ಬಲಗೊಳಿಸಿವೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಚಳವಳಿಗಾರರು, ಸಮಾನತೆ, ಸಂವಿಧಾನದ ಪರವಾಗಿ ಹೋರಾಟಗಾರರ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದರು.
ಮಾವಳ್ಳಿ ಶಂಕರ್ ಮಾತನಾಡಿ, ದೇಶದಲ್ಲಿ ರಾಜ್ಯಾಂಗ ಉಳಿಯಬೇಕು ಪಂಚಾಂಗವಲ್ಲ. ಅದಕ್ಕಾಗಿ ಬಣಗಳು ಒಂದಾಗಿ ಹೋರಾಟ ರೂಪಿಸಲಿದ್ದೇವೆ. ದೇಶದಲ್ಲಿ ಅಭಿವೃದ್ಧಿಯ ಭ್ರಮೆಯನ್ನು ಸೃಷ್ಟಿಸಲಾಗಿದೆ. ಧರ್ಮದ ಹೆಸರಿನಲ್ಲಿ ಜನರ ವಿಭಜನೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾವೇಶದ ಪೂರ್ವಭಾವಿಯಾಗಿ ದಸಂಸ ವಿವಿಧ ಬಣಗಳ ನಾಯಕರು ಮೈಸೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿ ಸಮಾವೇಶದ ಕರಪತ್ರ ಅನಾವರಣ ಮಾಡಿದರಲ್ಲದೇ ವಿಭಾಗೀಯ ಮಟ್ಟದ ಸಮಾವೇಶ ನಡೆಸಿ ಸಮಾವೇಶದ ಯಶಸ್ಸಿಗೆ ಕೋರಿದರು.
ಕಾರ್ಯಕ್ರಮದಲ್ಲಿ ಮಾವಳ್ಳಿ ಶಂಕರ್, ಅಣ್ಣಯ್ಯ, ಎನ್.ವೆಂಕಟೇಶ್, ವಿ.ನಾಗರಾಜ್, ಎನ್.ಮುನಿಸ್ವಾಮಿ, ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್ ಹಾಜರಿದ್ದರು.
ಉಸ್ತುವಾರಿ ಸಚಿವರ ರಾಜಿನಾಮೆಗೆ ಒತ್ತಾಯ
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಲೆಮಾರಿ ಜನರು ಪ್ರತಿಭಟನೆ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇಷ್ಟೊಂದು ಲಜ್ಜೆಗೆಟ್ಟು ಮಾತನಾಡಬಾರದು. ಈ ವಿಚಾರವೇ ತಿಳಿಯದೆಂದ ಸಚಿವರು ರಾಜೀನಾಮೆ ಕೊಡಬೇಕು. ಅಲೆಮಾರಿ ಜನರ ಹೋರಾಟದಲ್ಲಿ ದಸಂಸ ಬೆಂಬಲ ಇದೆ.-ಮಾವಳ್ಳಿ ಶಂಕರ್
0 ಕಾಮೆಂಟ್‌ಗಳು