ಹೇಳಿಕೆ ಹಿಂಪಡೆದು ಕ್ಷಮೆ ಕೇಳುವಂತೆ ಒತ್ತಾಯ
ಮೈಸೂರು : ದಲಿತ ಸಮುದಾಯಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕೂಡಲೇ ತಮ್ಮ ಹೇಳಿಕೆ ಹಿಂಪಡೆದು ದಲಿತರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ `ಸ್ವಾಭಿಮಾನಿ ಕರುನಾಡು ದಲಿತರ ಯುವಪಡೆ’ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಟೌನ್ ಹಾಲ್ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಶಂಭುಲಿಂಗಸ್ವಾಮಿ ಮಾತನಾಡಿ, ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಜೆಡಿಎಸ್ ಪಕ್ಷದ `ಪಂಚರತ್ನ’ ರಥಯಾತ್ರೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಮ್ಮ ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿದೆ, ಅವರೇನು `ಅಸ್ಪøಶ್ಯರೇ’ ಎಂದು ಹೇಳಿಕೆ ನೀಡಿರುವುದು ಅವರ ಮನದಲ್ಲಿ ಹುದುಗಿರುವ ಜಾತಿಯತೆ ಅನಾವರಣವಾಗಿದೆ. ಈ ಮೂಲಕ ಅವರು ನೇರವಾಗಿ ಅಸ್ಪøಶ್ಯರು ಈ ರಾಜ್ಯದ ಮುಖ್ಯಮಂತ್ರಿಗಳಾಗಲು ಅರ್ಹರಲ್ಲ ಎನ್ನುವುದನ್ನು ಹೇಳಿದ್ದಾರೆ ಎಂದು ಕಿಡಿ ಕಾರಿದರು.
ಕುಮಾರಸ್ವಾಮಿ ಅವರು ಮೊದಲು ತಮ್ಮ ಪಕ್ಷದ ಹೆಸರಿನ ಜಾತ್ಯತೀತ ಎನ್ನುವ ಪದ ತೆಗೆದು ಜಾತಿ ಹೆಸರು ಹಾಕಿಕೊಳ್ಳಲಿ ಎಂದ ಅವರು, ವೇದಿಕೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಯ ಬಗ್ಗೆ ಬೊಗಳೆ ಬಿಡುವ ಕುಮಾರಸ್ವಾಮಿ, ಮತ್ತೊಂದೆಡೆ ಬಹಿರಂಗವಾಗಿಯೇ ಅಸ್ಪøಶ್ಯತೆ ಆಚರಣೆಗೆ ಪ್ರೋತ್ಸಾಹ ನೀಡುತ್ತಿರುವುದು ಅವರ ಇಬ್ಬಂದಿ ನೀತಿಯನ್ನು ತೋರುತ್ತದೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸಂವಿಧಾನದ ಆಶಯಗಳನ್ನು ಈಡೇರಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ ಅವರ ಬಾಯಲ್ಲಿ ಇಂತಹ ಮಾತು ಕೇಳಿರುವುದು ನಮ್ಮ ದುರ್ದೈವ. ಕೂಡಲೇ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಹೇಳಿಕೆ ಹಿಂಪಡೆದು ದಲಿತ ಸಮುದಾಯದ ಕ್ಷಮೆ ಯಾಚಿಸಬೇಕು. ಜತೆಗೆ ಸಮುದಾಯದ ಮುಖಂಡರು ಚುನಾವಣೆಗಳಲ್ಲಿ ಇಂತಹವರಿಗೆ ಬೆಂಬಲ ನೀಡುವ ಬಗ್ಗೆ ಮರು ಚಿಂತನೆ ಮಾಡಬೇಕಿದೆ ಎಂದರು.
ಪ್ರತಿಭಟನೆ ವೇಳೆ ಕುಮಾರಸ್ವಾಮಿ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಲಾಯಿತು. ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಮರಂಕಯ್ಯ, ಮರಿದೇವಯ್ಯ, ಕಲ್ಲಹಳ್ಳಿ ಕುಮಾರ್, ತಳೂರು ಪ್ರಸನ್ನ, ಮಂಡಕಳ್ಳಿ ಮಹೇಶ, ಬೋಗಾದಿ ಮಹದೇವ ಮುಂತಾದವರು ಇದ್ದರು.
0 ಕಾಮೆಂಟ್‌ಗಳು