ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವು : ಕೊಲೆ ಶಂಕೆ

ಮೈಸೂರು : ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮಹಿಳೆಯ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
21 ವರ್ಷದ ತರನ್ನುಮ್ ಬಾನು ಸಾವಿಗೀಡಾದ ಮಹಿಳೆ. ಈಕೆ ಮೂಲತಃ ಮಂಡ್ಯ ನಗರದ ಡ್ರೈವರ್ ಬಷೀರ್ ಖಾನ್ ಎಂಬವರ ಮಗಳು. 3 ವರ್ಷದ ಹಿಂದೆ ಮೈಸೂರಿನ ರಾಜೀವ್ ನಗರದ ನಿವಾಸಿ ಶಬ್ ನಮ್ ಕಲ್ಯಾಣ ಮಂದಿರದ ಸಮೀಪ ವಾಸವಾಗಿರುವ ಜಿಮ್ ಟ್ರೈನರ್ ಸೈಯದ್ ಉಮರ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ಒಂದು ವರ್ಷದ ಒಂದು ಮಗುವಿದೆ. 
ಮದುವೆಯಾದಾಗಿನಿಂದಲೂ ಸೈಯದ್ ಉಮರ್ ನಮ್ಮ ಸಹೋದರಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಪದೇ ಪದೇ ಹೊಡೆದು ತವರು ಮನೆಗೆ ಕಳಿಸುತ್ತಿದ್ದ, ಮದುವೆ ಸಂದರ್ಭ 7 ಲಕ್ಷ ಮೌಲ್ಯದ ಚಿನ್ನಾಭರಣ ನೀಡಲಾಗಿತ್ತು. ಆದಾಗ್ಯೂ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ನ್ಯಾಯ ಪಂಚಾಯ್ತಿಗಳೂ ನಡೆದಿದ್ದವು. ಇತ್ತೀಚೆಗೆ ಮೂರು ತಿಂಗಳು ನಮ್ಮ ಸಹೋದರಿ ಮಂಡ್ಯದಲ್ಲೇ ಇದ್ದು, ಕಳೆದ 3 ತಿಂಗಳ ಹಿಂದೆ ಒಂದಷ್ಟು ಹಣ ನೀಡಿ ಗಂಡನ ಮನೆಗೆ ಕಳಿಸಲಾಗಿತ್ತು ಎಂದು ಮೃತ ತರನ್ನುಮ್ ಮಲ ಸಹೋದರ ಇರ್ಪಾನ್ ತಿಳಿಸಿದರು.
ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಉದಯಗಿರಿ ಠಾಣೆಯ ಪೊಲೀಸರು ಆರೋಪಿ ಸೈಯದ್ ಉಮರ್ ಮತ್ತು ಅವರ ತಂದೆ ಲಿಯಾಖತ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು