ಓಟು ಕೇಳಲು ಬಂದ್ರೆ ಚಾಟಿ ಏಟು : ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ ಕಬ್ಬು ಬೆಳೆಗಾರರು

8ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಪ್ರತಿಭಟನೆ ಗಮನಸೆಳೆದ ಇಂದಿನ  `ಬಾರ್ ಕೋಲು' ಚಳವಳಿ 

ಮೈಸೂರು : ಶಾಸಕರು, ಸಂಸದರು ಬಂಡವಾಳಶಾಹಿಗಳ ಪರ ಇದ್ದು, ರೈತರ ಸದಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಓಟು ಕೇಳಲು ನಮ್ಮ ಬಳಿ ಬಂದರೆ ಚಾಟಿ ಏಟು ಕೊಟ್ಟು ಮನೆಗೆ ಕಳುಹಿಸುವುದಾಗಿ ಕಬ್ಬು ಬೆಳೆಗಾರರು ಶಾಸಕರು ಮತ್ತು ಸಂಸದರ ವೇ ಷಧಾರಿಗಳಿಗೆ ಚಾಟಿಯಿಂದ ಹೊಡೆಯುವಂತೆ ಅಣುಕು ಪ್ರದರ್ಶನ ನೀಡಿ ಜನ ಪ್ರತಿನಿಧಿಗಳನ್ನು ಎಚ್ಚರಿಸಿದರು. 
ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. 
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ,  ಸರ್ಕಾರವೇ ಮಾರ್ವಾಡಿಗಳ, ಬಂಡವಾಳಶಾಹಿಗಳ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈತರು ಬಲಿಪಶುಗಳಾಗುತ್ತಿದ್ದಾರೆ. ಟನ್ ಕಬ್ಬಿಗೆ 7,500 ರೂ.ಗಳಿಗೂ ಹೆಚ್ಚು ಆದಾಯವಿದೆ. ಒಂದು ಟನ್ ಕಬ್ಬಿನಿಂದ ನೂರು ಲೀಟರ್ ಇಥೇನಾಲ್ ಉತ್ಪತ್ತಿಯಾಗುತ್ತದೆ. ಇದು ಲೀಟರಿಗೆ 65 ರೂ, ಇದ್ದು, ಒಂದು ಟನ್ ಕಬ್ಬಿನ ಸಿಪ್ಪೆಯಿಂದ 144 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಮಡ್ಡಿಯಿಂದ ಗೊಬ್ಬರ ಉತ್ಪಾದಿಸಲಾಗುತ್ತದೆ. ಎಲ್ಲಾ ಸೇರಿ ಒಂದು ಟನ್ ಕಬ್ಬಿಗೆ 7,500 ರೂ. ಆದಾಯ ಬರುತ್ತದೆ, ವರ್ಷಕಾಲ ಕಷ್ಟಪಟ್ಟು ಬೆಳೆದ ರೈತನಿಗೆ 3,000 ಮಾತ್ರ ಕೊಡುವುದು ಏಕೆ? ಇದು ಅನ್ಯಾಯ ಎಂಬುದು ನಮ್ಮ ಪ್ರಶ್ನೆ ಎಂದರು.  
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಹಾಡ್ಯ ರವಿ, ಅಂಬಳೆ ಮಂಜುನಾಥ್, ಲಕ್ಷ್ಮೀಪುರ ವೆಂಕಟೇಶ್, ವರಕೂಡು ಜಯರಾಮು, ಟಿ.ರಾಮೇಗೌಡ, ಸೋನಹಳ್ಳಿ ದೊರೆಸ್ವಾಮಿ, ಬಸವಣ್ಣ, ಮಂಜುನಾಥ್, ಕುರುಬೂರು ಮಂಜು, ಮಾರ್ಬಳ್ಳಿ ನೀಲಕಂಠಪ್ಪ, ಚುಂಚರಾಯನಹುಂಡಿ ತಮಯಪ್ಪ, ಮಲ್ಲಪ್ಪ, ಮಾದೇವಸ್ವಾಮಿ, ಮುದ್ದಹಳ್ಳಿ ಶಿವಣ್ಣ, ದಿನೇಶ್ ಇನ್ನು ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು