ಹನೂರಿನಲ್ಲಿ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರ : ಸೋಂಕಿತರು ಶೀಘ್ರ ತಪಾಸಣೆಗೆ ಒಳಗಾಗುವುದು ಒಳಿತು

 -ಶಾರುಕ್ ಖಾನ್, ಹನೂರು

ಹನೂರು : ಪಟ್ಟಣ ಪಂಚಾಯತಿ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ರಾಜ್ಯ ಏಡ್ಸ್ ಪ್ರಿವೇನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆ ಐಸಿಟಿಸಿ ಕೇಂದ್ರದ ವತಿಯಿಂದ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣ ಪಂಚಾಯಿತಿ, ಸ್ವಯಂ ಸೇವಾ ಸಂಸ್ಥೆಗಳಾದ ಚೈತನ್ಯ ನೆಟ್ವರ್ಕ್, ಸಮತಾ ಸೊಸೈಟಿ, ಸ್ನೇಹಜೋತಿ ಮಹಿಳಾ ಸಂಘ ಹಾಗೂ ಕೂರ್ ಸಂಪರ್ಕ ಕಾರ್ಯಕರ್ತರ ಸಂಯೋಜನೆಯಲ್ಲಿ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. 
ಇದೇ ವೇಳೆ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕರಾದ ಮಹಾದೇವ ಪ್ರಸಾದ್ ಮಾತನಾಡಿ, ಹನೂರು ತಾಲ್ಲೂಕು ಅಂತರ್ ರಾಜ್ಯ, ಜಿಲ್ಲೆ, ದಟ್ಟ ಅರಣ್ಯ ಪ್ರದೇಶವನ್ನು ಒಳಗೊಂಡಿರುವ ತಾಲೂಕಾಗಿದ್ದು ಇಲ್ಲಿ ವಾಸಿಸುತ್ತಿರುವ ಹಲವಾರು ಮಂದಿ ಕೂಲಿ ಕಾರ್ಮಿಕರಾಗಿ ದೂರದ ಪ್ರದೇಶಗಳಲ್ಲಿ ಕೆಲಸಕ್ಕೆ ಹೋಗಿ ಬರುತ್ತಾರೆ. ಹೊರ ಪ್ರದೇಶಗಳಲ್ಲಿ ದುಡಿಯುತ್ತಿರುತ್ತಾರೆ. 
ಇಂಥವರುಗಳು ಹಲವಾರು ಕಾರಣಗಳಿಂದ ತಮಗರಿವಿಲ್ಲದೆ ಅಪಾಯಕ್ಕೆ ತುತ್ತಾಗುವವರು. ಹಾಗೂ ಅಪಾಯದ ಅಂಚಿನಲ್ಲಿ ಇದ್ದು, ಇದರಿಂದಾಗಿ ಹಲವಾರು ಖಾಯಿಲೆಗಳಿಗೆ ತುತ್ತಾಗುವ ಸಂಭವವಿರುತ್ತದೆ. ತಮ್ಮಗರಿವಿಲ್ಲದೆ ಸೋಂಕಿತರಾಗಿರುವ ವ್ಯಕ್ತಿಗಳು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗಿ ಮರಣ ಹೊಂದುವ ಸಂಭವವಿರುತ್ತದೆ.
ಈ ಎಲ್ಲಾ ಕಾರಣಗಳಿಂದ ಸರ್ಕಾರವು 2030 ರ ಒಳಗೆ ಹೆಚ್‍ಐವಿ ಮುಕ್ತ ದೇಶವನ್ನಾಗಿ ಮಾಡಲು ಪಣತೊಟ್ಟಿದ್ದು ಅದರಂತೆ ಈ ಗುರಿಯನ್ನು ತಲುಪಬೇಕಾದರೆ ಬಹು ಮುಖ್ಯವಾಗಿ ಈ ಮೂರು ಹಂತಗಳಲ್ಲಿ ಅಂದರೆ ಶೇಕಡ 95 ಕ್ಕಿಂತ ಹೆಚ್ಚು ಜನರಿಗೆ ಎಚ್‍ಐವಿ ಬಗ್ಗೆ ಜಾಗೃತಿ ಮತ್ತು ಅರಿವು ಹಾಗೂ ರಕ್ತ ಪರೀಕ್ಷೆಗೆ ಒಳಪಡಿಸಬೇಕು.
ಸೋಂಕಿತರಿಗೆ ಸರ್ಕಾರದಿಂದ ದೊರೆಯುವ ಉಚಿತ ಚಿಕಿತ್ಸೆಯನ್ನು (ಎ.ಆರ್.ಟಿ) ನಿರಂತರವಾಗಿ ತಲುಪಿಸಬೇಕು, ಕೊನೆಯದಾಗಿ ಶೇಕಡ 95ಕ್ಕಿಂತ ಹೆಚ್ಚು ಸೋಂಕಿತರಿಗೆ ಸಮಾಜದ ಮುಖ್ಯ ವಾಹಿನಿಗೆ ತರುವುದು ಹಾಗೂ ಉಚಿತ ಕಾನೂನು ನೆರವಿನೊಂದಿಗೆ ಯಾವುದೇ ಕಳಂಕ ತಾರತಮ್ಯ ಆಗದಂತೆ ಗೌಪ್ಯತೆಯನ್ನು ಕಾಪಾಡುವುದು, ಸಾಮಾಜಿಕ ಸವಲತ್ತುಗಳನ್ನು ದೊರಕಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಇನ್ಸ್‍ಪೆಕ್ಟರ್ ಸಂತೋμï ಕಶ್ಯಪ್, ಡಾ.ಪುಷ್ಪಾರಾಣಿ, ಡಾ.ಪ್ರಕಾಶ್, ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಡಾ.ನಟೇಶ್, ಪ್ರಯೋಗಶಾಲ ತಜ್ಞರಾದ ಡಯಾನ ಸುಧಾ, ಪುಷ್ಪಮೂರ್ತಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿ ಮಂಜಪ್ಪ ಸೇರಿದಂತೆ ಕೂರ್ ಸಂಪರ್ಕ ಕಾರ್ಯಕರ್ತೆಯರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು