ಶಾಸಕ ರಾಮದಾಸ್ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ : ಆಶ್ರಯ ಸಮಿತಿ ಸದಸ್ಯೆ ವಿದ್ಯಾ ಅರಸ್ ಸ್ಪಷ್ಟನೆ

ಮೈಸೂರು : ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಎಲ್ಲ ಜನರಿಗೆ ಸ್ವಂತ ಸೂರು ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಶಾಸಕ ಎಸ್.ಎ. ರಾಮದಾಸ್ ಕಾರ್ಯಪ್ರವೃತ್ತರಾಗಿದ್ದಾರೆ. ಹೀಗಾಗಿ ಅವರ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಆಶ್ರಯ ಸಮಿತಿ ಸದಸ್ಯರಾದ ಎ.ವಿ. ವಿದ್ಯಾಅರಸ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 12,500ಕ್ಕೂ ಹೆಚ್ಚು ಫಲಾನುಭವಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿನ ಅರ್ಹ ಫಲಾನುಭವಿಗಳಿಗೆ ಮನೆ ನೀಡಲು ಬೇಕಾದ ಭೂಮಿಯನ್ನು ಸರ್ಕಾರದಿಂದ ಪಡೆದು, ಇದಕ್ಕೆ ಸಂಬಂಧಿಸಿದ ಯೋಜನೆ ಸಿದ್ಧಪಡಿಸಿ, ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಇದಲ್ಲದೆ ಹೆಚ್ಚುವರಿ ಮನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಆದರೆ ಎರಡು ದಿನ ಹಿಂದೆ ಮನೆಗಳ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡುತ್ತ ಪಾಲಿಕೆ ಎದುರು ಧರಣಿ ನಡೆಸುತ್ತಿರುವುದು ಖಂಡನಾರ್ಹವೆಂದರು. ಜೊತೆಗೆ ಈ ಹಿಂದಿನ ಶಾಸಕರಾದ ಎಂ.ಕೆ. ಸೋಮಶೇಖರ್ ಅವರ ಅವಧಿಯ ಸಂದರ್ಭದಲ್ಲಿ ಆಶ್ರಯ ಸಮಿತಿ ಸಭೆ ಅವರ ಅಧ್ಯಕ್ಷತೆಯಲ್ಲೇ ನಡೆದಿತ್ತು. ಆದರೆ ಜಮೀನು ಕೊರತೆ ಕಾರಣ ವೈಯಕ್ತಿಕ ಮನೆ ನಿರ್ಮಿಸಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಜಿ+2 ಮಾದರಿಯಲಿ ಮನೆ ನಿರ್ಮಿಸಲು ನಿರ್ಧರಿಸಲಾಗಿತ್ತೆಂದರು.
ಇನ್ನು, ಗೊರೂರು ಬ್ಲಾಕ್ ನಂಬರ್ ಎಂಟರಲ್ಲಿ ಯಾರು ಯಾರಿಗೆ ಮನೆಗಳ ನಿವೇಶನ ನೀಡಿ ನೋಂದಣಿ ಮಾಡಿಕೊಡಲಾಗಿತ್ತೊ ಅಂತಹವರಿಂದ ಒಪ್ಪಿಗೆ ಪತ್ರ ಪಡೆದು ಜಿ+2 ಮಾದರಿ ಮನೆ ನಿರ್ಮಾಣದ ಯೋಜನೆಯ ಡಿಪಿಆರ್ ತಯಾರು ಮಾಡಿ ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಪಡೆದು, ಟೆಂಡರ್ ಕರೆದು ಮನೆಗಳ ನಿರ್ಮಾಣ ಮಾಡಲು ಎಂ.ಕೆ. ಸೋಮಶೇಖರ್ ಅವರೇ ಮುಂದ್ದಾಗಿದ್ದರು. ಆದರೂ ಅವರಿಂದ ಮನೆ ನಿರ್ಮಾಣ ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು.
ಬಳಿಕ, ಶಾಸಕ ಎಸ್.ಎ. ರಾಮದಾಸ್ ಅವರು ಬೇರೆ ಬೇರೆ ಯೋಜನೆಗಳನ್ನು ಬೇರೆ ಬೇರೆ ಜಾಗಗಳಲ್ಲಿ ಮತ್ತು ವಿವಿಧ ಹಂತಗಳಲ್ಲಿ ಜಾರಿಗೆ ತರುತಿದ್ದು, ಈ ಕುರಿತ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದೆಂದರು.
ಹೇಮಂತ್‍ಕುಮಾರ್, ಬಿ. ಗೌರಿ, ಹನ್ಸರಾಜ್ ಹಾಜರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು