ನಕಲಿ ದಾಖಲೆ ಸೃಷ್ಟಿಸಿ ಕೊಟ್ಯಾಂತರ ರೂ. ಮೌಲ್ಯದ ಆಸ್ತಿ ಪರಭಾರೆ : ದೂರು ಸ್ವೀಕರಿಸಲು ಎನ್.ಆರ್.ಪೊಲೀಸರ ನಕಾರ : ಆರೋಪ

ಮೈಸೂರು : ನಗರದ ಗಾಂಧಿ ನಗರ ನಿವಾಸಿಯಾದ ತಾವು 2007 ರಲ್ಲಿ ಮಹದೇವಸ್ವಾಮಿ ಎಂಬುವವರನ್ನು ವಿವಾಹವಾಗಿದ್ದು, ಅವರು 2014 ರಲ್ಲಿ ನಿಧನರಾದರು. ಆದರೆ ಪತಿಯ ಅಕ್ಕ ಭಾನುಮತಿ ಎಂಬುವವರು ಮಹದೇವಸ್ವಾಮಿ ಅವಿವಾಹಿತರಾಗಿದ್ದರೆಂದು ನಕಲಿ ದಾಖಲೆ ಸೃಷ್ಟಿಸಿ ತಮಗೆ ಬರಬೇಕಾಗಿದ್ದ ಆಸ್ತಿ ಕಬಳಿಸಿದ್ದಾರೆ ಎಂದು ನಾಗವೇಣಿ ಎಂಬುವವರು ಆರೋಪಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪತಿಯ ಮರಣಾ ನಂತರ ತಾವು ತಲಕಾಡಿನಲ್ಲಿನ ತಮ್ಮ ತಾಯಿ ಮನೆಯಲ್ಲಿ ವಾಸಿಸುತ್ತಿದ್ದು, ಭಾನುಮತಿ ಅವರು ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ., ಬೆಲೆಬಾಳುವ ಕಸಬಾ ಹೋಬಳಿ ಕೆಸರೆ ಗ್ರಾಮದಲ್ಲಿನ 1.22 ಎಕರೆ ಜಮೀನನ್ನು ಮಂಜುನಾಥ ಎಂಬುವವರಿಗೆ ಮಾರಾಟ ಮಾಡಿದ್ದಾರೆ.
ಹೀಗಾಗಿ ತಾವು ಎನ್.ಆರ್. ಠಾಣೆಗೆ ದೂರು ನೀಡಲು ಹೋದಲ್ಲಿ ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ದೂರು ದಾಖಲಾಗುವಂತೆ ನೋಡಿಕೊಂಡು ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಠಾಣೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.
ಸಂಘಟನೆಯ ಸಿದ್ದರಾಜು, ಮಲ್ಲೇಶ್ ಅಂಬುಗ, ಕುಮಾರ್ ಗಾಂಧಿನಗರ ಹಾಗೂ ಶಿವಣ್ಣ ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು