ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುವ ಹೇಳಿಕೆ ವಿರುದ್ಧ ಮಂಡ್ಯದಲ್ಲಿ ಭಾರಿ ಪ್ರತಿಭಟನೆ : ಖರ್ಗೆ ಭದ್ರತೆಗೆ ಒತ್ತಾಯ
ನವೆಂಬರ್ 14, 2022
ಮಂಡ್ಯ : ಮಾಜಿ ಸಚಿವ, ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಬಿಜೆಪಿ ಮುಖಂಡರೊಬ್ಬರು ಎಕೆ-47 ನಿಂದ ಶೂಟ್ ಮಾಡುವುದಾಗಿ ಹೇಳಿರುವ ಹೇಳಿಕೆಯ ಹಿಂದಿರುವ ದುಷ್ಟ ಶಕ್ತಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಬಿಜೆಪಿ ಹಾಗೂ ಆರ್‍ಎಸ್‍ಎಸ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದ ಕಾರ್ಯಕರ್ತರು, ಘಟನೆ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು. ಈ ವೇಳೆ ಸುಂಡಹಳ್ಳಿ ಮಂಜುನಾಥ್ ಮಾತನಾಡಿ, ಮಾಜಿ ಸಚಿವ, ಶಾಸಕರೂ ಆದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರಿಗೆ ಬಿಜೆಪಿ ಮುಖಂಡ, ಬೀದಿ ರೌಡಿಯೊಬ್ಬ ಎ.ಕೆ.-47 ನಿಂದ ಶೂಟ್ ಮಾಡಲು ನಾನು ರೆಡಿ ಇದ್ದೇನೆ ಎಂಬ ಹೇಳಿಕೆಯ ಹಿಂದೆ ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷ ಪ್ರಿಯಾಂಕ್ ಖರ್ಗೆರವರ ಕೊಲೆಗೆ ಸಂಚು ರೂಪಿಸುತ್ತಿರುವ ಅನುಮಾನವಿದೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಪಿ.ಎಸ್.ಐ. ಹಗರಣ, ಬಿಟ್‍ಕಾಯಿನ್, ಪಿ.ಡಬ್ಲ್ಯೂಡಿ, ಹಗರಣ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ, ಎಫ್.ಡಿ.ಎ., ಗಂಗಾಕಲ್ಯಾಣ, ಮುಂತಾದ ಸಾಲು ಸಾಲು ಹಗರಣಗಳನ್ನು ಬಯಲಿಗೆಳೆದು ಬಸವಣ್ಣನವರ ತತ್ವ, ಬುದ್ಧರ ಆದರ್ಶ, ಅಂಬೇಡ್ಕರ್‍ರವರ ಹೋರಾಟದ ತತ್ವಗಳನ್ನು ಮೈಗೂಡಿಸಿಕೊಂಡಿರುವ ಸದನದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡುತ್ತಿರುವ ಪ್ರಿಯಾಂಕ ಖರ್ಗೆ ಅಂತಹವರಿಗೆ ಪ್ರಾಣ ಬೆದರಿಕೆ ಇರುವಂತದ್ದು, ಈ ರಾಜ್ಯದಲ್ಲಿ ಸತ್ಯ ಹೇಳುವ ಶಾಕಸಕರಿಗೆ, ಭದ್ರತೆ ಇಲ್ಲದಿರುವುದು ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು. ಪ್ರಿಯಾಂಕ ಖರ್ಗೆ ರವರು 40% ಕಮೀಷನ್ ತಗೊಂಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ಅಧಿಕಾರ ದುರ್ಬಳಕೆ ಮಾಡಿಲ್ಲ, ನಾಡಿನ ಶೋಷಿತರ ದಮನಿತರ ಧನಿಯಾಗಿರುವುದಕ್ಕೆ ಶೂಟ್ ಮಾಡ್ತೀರಾ? ಬಿಜೆಪಿಗೆ ದೇಶದ ದಲಿತರ ಶಕ್ತಿಯಾಗಿ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕುತಂತ್ರದಿಂದ ಸೋಲಿಸಿ ಬಿಟ್ಟಿದ್ದೇವೆ. ಪ್ರಿಯಾಂಕ್‍ಖರ್ಗೆರವರನ್ನು ಸೋಲಿಸಿಬಿಟ್ಟರೆ ದಲಿತರ ರಾಜಕೀಯ ಶಕ್ತಿಯನ್ನು ಮುಗಿಸಬಹುದು ಎಂಬ ಲೆಕ್ಕಾಚಾರದಿಂದ ಇಂತಹ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
ದಲಿತರ ಏಳಿಗೆಯನ್ನು, ಬೆಳವಣಿಗೆಯನ್ನು ಸಹಿಸದೆ, ಸದಾ ಆರ್.ಎಸ್.ಎಸ್.ನ ತತ್ವವನ್ನು ಕಟುವಾಗಿ ಟೀಸುವ ವಿರೋಧಿಸುವ ಪ್ರಿಯಾಂಕ ಖರ್ಗೆರವರ ಕೊಲೆ ಮಾಡುವುದಾಗಿ ಹೇಳಿಕೆ ನೀಡಿರುವ ಬೀದಿ ರೌಡಿಯೊಬ್ಬನ ಮೇಲೆ ಕ್ರಮ ಕೈಗೊಳ್ಳದಿರುವುದು ಪ್ರಿಯಾಂಕಖರ್ಗೆರವರ ಕೊಲೆಗೆ ಸರ್ಕಾರವೇ ಪ್ರಚೋದನೆ ನೀಡುತ್ತಿದೆಯೇನೋ ಎಂಬ ಅನುಮಾನ ಮೂಡಿದೆ ಎಂದರು. ಕೊಲೆ ಮಾಡುವ ಹೇಳಿಕೆ ನೀಡಿರುವ ಹೇಳಿಕೆಯ ಹಿಂದಿನ ಪ್ರಭಾವಿ ಶಕ್ತಿಗಳ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಹಾಗೂ ಹಾಲಿ ಶಾಸಕರಾಗಿರುವ ಪ್ರಿಯಾಂಕ ಖರ್ಗೆರವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಸಾತನೂರು ಕೃಷ್ಣ, ತಾಲೂಕು ಕಿಸಾನ್ ಘಟಕದ ಅಧ್ಯಕ್ಷ ಚಿನಕುರಳಿ ರಮೇಶ್, ಶ್ರೀರಂಗಪಟ್ಟಣ ಉಸ್ತುವಾರಿ ವೀಣಾ ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುದ್ರಪ್ಪ, ಸಂಪಹಳ್ಳಿ ಉಮೇಶ್, ಜಿಲ್ಲಾ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಸಾಮಾಜಿಕ ಜಾಲತಾಣದ ಸಂಚಾಲಕ ಅನಿಲ್ ಕುಮಾರ್, ಮುಖಂಡರಾದ ಶೆಟ್ಟಹಳ್ಳಿ ಮಂಜು, ಕಿರಣ್ ಕುಮಾರ್, ಗ್ರಾ.ಪಂ ಸದಸ್ಯೆ ಶಶಿಕಲಾ, ಶಕುಂತಲಾ,ಕನಕಮ್ಮ, ಮಮತಾ ಚನ್ನಪ್ಪ ಇತರರಿದ್ದರು.
0 ಕಾಮೆಂಟ್‌ಗಳು