ಮಂಡ್ಯ ಜನತೆ ಮತ್ತೆ ಚಳವಳಿಗಳನ್ನು ಕಟ್ಟುತ್ತಿರುವುದು ಆಶಾದಾಯಕ ಬೆಳವಣಿಗೆ : ಎಸ್.ಸಿ.ಮಧುಚಂದನ್
ನವೆಂಬರ್ 14, 2022
ಹುಲಿವಾನ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಗ್ರಾಮ ಘಟಕ ಉದ್ಘಾಟನೆ
ಮಂಡ್ಯ : ತಾಲೂಕಿನ ಹುಲಿವಾನ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು. ಗ್ರಾಮ ಘಟಕ ಉದ್ಘಾಟಿಸಿದ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಇತಿಹಾಸದಲ್ಲಿ ರೈತ ಚಳವಳಿಗಳಿಗೆ ಘನವಾದ ಸ್ಥಾನವಿದೆ. ನಿಧಾನವಾಗಿ ಮಂಡ್ಯ ಜನತೆ ಮತ್ತೆ ಚಳವಳಿಗಳನ್ನು ಕಟ್ಟುವಲ್ಲಿ ತಮ್ಮ ಮನಸ್ಸು ಬದಲಾಯಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು. ಚಳವಳಿಗಳು ವ್ಯವಸ್ಥೆಯನ್ನು ಬಡಿದೆಚ್ಚರಿಸುವ ಶಕ್ತಿಶಾಲಿ ಮಾಧ್ಯಮಗಳು. ಇದಕ್ಕೆ ನಿಮಗೆ ಒಂದು ಉತ್ತಮ ನಿರ್ದೇಶನ ಹೇಳುವುದಾದರೆ ಮಂಡ್ಯ ನಗರದಲ್ಲಿ ಮಂಡಿ ಉದ್ದ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಖಂಡಿಸಿ ಬೃಹತ್ ಬೈಕ್ ರಾಲಿ ಹಮ್ಮಿಕೊಂಡು ನಗರಸಭೆ ಹಾಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪರಿಣಾಮ ಇಂದು ಮಂಡ್ಯ ನಗರದ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪುಗೌಡ ಮಾತನಾಡಿ, ಒಂದು ಕಾಲದಲ್ಲಿ ಚಳವಳಿಗಳು ಎಂದರೆ ಸರಕಾರ ಮತ್ತು ರಾಜಕೀಯ ನಾಯಕರುಗಳು ನಡುಗುವಂತಹ ಸ್ಥಿತಿಯಲ್ಲಿದ್ದವು, ಆದರೆ ಇಂದು ನಮ್ಮನಾಳುವ ಸರ್ಕಾರಗಳು ಹಾಗೂ ಹಲವು ರಾಜಕೀಯ ನಾಯಕರುಗಳ ಪಿತೂರಿಗೆ ಸಿಲುಕಿ ರೈತ ಸಂಘವನ್ನು ನಿರಂತರವಾಗಿ ಒಡೆಯುತ್ತಾ ಮತ್ತು ಚಳವಳಿಗಾರರನ್ನು ದಮನ ಮಾಡುತ್ತಾ ಬಂದ ಪರಿಣಾಮವಾಗಿ ಚಳವಳಿಗಾರರು ಕಡಿಮೆಯಾಗುತ್ತಿದ್ದಾರೆ ಎಂದು ವಿμÁದ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಎನ್.ಗೌಡ ಮಾತನಾಡಿ, ಚಳುವಳಿಗಳ ಹಿನ್ನೆಲೆಯಿಂದ ವಿಧಾನಸಭಾ ಪ್ರವೇಶಿಸಿದ್ದ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನ ನಂತರ 10ಕ್ಕೂ ಹೆಚ್ಚು ಅಧಿವೇಶನಗಳು ನಡೆದಿದೆ, ಜನರಿಂದ ಆಯ್ಕೆಯಾದ ಶಾಸಕರು ಕಬ್ಬಿಗೆ ಎಸ್‍ಎಪಿ, ಎಫ್‍ಆರ್‍ಪಿ ದರವನ್ನು ನಿಗದಿಪಡಿಸಿ ಎಂದು ಯಾರಾದರೂ ದನಿಯೆತ್ತಿದ್ದಾರೆಯೇ?. ಆದ್ದರಿಂದ ಜನತೆಯಲ್ಲಿ ಕೈ ಮುಗಿದು ಕೇಳುತ್ತೇನೆ ಜನರ ಸಮಸ್ಯೆ, ರೈತರ ಸಮಸ್ಯೆ ಅರಿತಿರುವ ನಾಯಕನನ್ನು ನೀವೆಲ್ಲರೂ ಆಯ್ಕೆ ಮಾಡಿಕೊಳ್ಳಬೇಕು ಎಂದರು. ಇದೇ ವೇಳೆ ಐವತ್ತಕ್ಕೂ ಹೆಚ್ಚು ಮಹಿಳೆಯರು, ಯುವಕರು ಹಾಗೂ ಹಿರಿಯರು ರೈತಸಂಘಕ್ಕೆ ಸೇರ್ಪಡೆಯಾದರು. ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಜಿಲ್ಲಾ ಖಜಾಂಚಿ ಶೆಟ್ಟಳ್ಳಿ ರವಿಕುಮಾರ್, ಮಂಡ್ಯ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು, ಪಾಂಡವಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್, ಮರಿಚೆನ್ನೇಗೌಡ, ರಾಮಕೃಷ್ಣ ಇತರರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು