ಗರಡಿಕೇರಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯಶಸ್ವಿಯಾಗಿ ಜರುಗಿದ ಆರೋಗ್ಯ ತಪಾಸಣೆ, ಮಹಾ ಅನ್ನ ಸಂತರ್ಪಣೆ

ಮೈಸೂರು : 45 ನೇ ವರ್ಷದ ಕಾರ್ತಿಕ ಮಾಸದ ಅಂಗವಾಗಿ ನಗರದ ಗರಡಿಕೇರಿ ಬೀದಿಯಲ್ಲಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಹಾ ಅನ್ನ ಸಂತರ್ಪಣೆ ಯಶಸ್ವಿಯಾಗಿ ಜರುಗಿತು.

ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷರಾದ ಎಂ.ಶಿವಣ್ಣ ಹಾಗೂ ಅಧ್ಯಕ್ಷರಾದ ಗುಡ್ಡಪ್ಪ ಎಂ.ಎಸ್.ರವಿಕುಮಾರ್ ನೇತೃತ್ವದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ಬೆಣ್ಣೆ ಅಲಂಕಾರ ಮತ್ತು ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಬೆಳಿಗ್ಗೆ 10 ಗಂಟೆಗೆ ಬಿಸಿ’ಎಸ್  ಸ್ಪೋಟ್ರ್ಸ್ ಮೆಡಿಸನ್ ಸೆಂಟರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಅಗತ್ಯವಿದ್ದ ರೋಗಿಗಳಿಗೆ ಉಚಿತವಾಗಿ ಔಷದಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಆಫ್ ಕಾಮಧೇನು, ಲಯನ್ಸ್ ಕ್ಲಬ್ ಆಫ್ ಸಿರಿ, ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ, ಲಯನ್ ಸುರೇಶ್ ಗೋಲ್ಡ್ ಅವರ ಸಹಕಾರದೊಂದಿಗೆ ಸ್ಪರ್ಷ ಆರೋಗ್ಯ ಮತ್ತು ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ಆರೋಗ್ಯ ತಪಾಸಣೆಯೂ ನಡೆಯಿತು.

ಮದ್ಯಾಹ್ನ ಒಂದು ಗಂಟೆಯಿಂದ ಮಹಾ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹರೀಶ್ ಗೌಡ ಮಾತನಾಡಿ, ಇಲ್ಲಿನ ಶ್ರೀ ಮಲೆ ಮಹದೇಶ್ವರ ದೇವಾಲಯದಲ್ಲಿ ಕಳೆದ 45 ವರ್ಷಗಳಿಂದ ಕಾರ್ತಿಕ ಮಾಸದ ಪೂಜಾ ಕಾರ್ಯಗಳು ಶಿವಣ್ಣ ಅವರ ನೇತೃತ್ವದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿವೆ. ಸ್ವಾಮಿಯ ದರ್ಶನಕ್ಕೆ ನಾವು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಬೇಕೆಂದೇನಿಲ್ಲ. ಇಲ್ಲಿಯೇ ದರ್ಶನ ಪಡೆದು ಧನ್ಯರಾಗಬಹುದು ಎಂದರು.

ನಗರಪಾಲಿಕೆ ಸದಸ್ಯ ಗೋಪಿ ಮಾತನಾಡಿ, ಇಲ್ಲಿನ ದೇವಾಲಯದಲ್ಲಿ ಪೂಜಾ ಕಾರ್ಯದ ಜತೆ ಸಾಮಾಜಿಕ ಸೇವೆಗಳಾದ ಉಚಿತ ಆರೋಗ್ಯ ಶಿಬಿರ, ಕಣ್ಣಿನ ತಪಾಸಣೆ ಮುಂತಾದ ಸೇವೆಗಳು ನಡೆಯುತ್ತಿರುವುದು ಸಂತಸದ ವಿಷಯ ಎಂದರು.
ಟ್ರಸ್ಟ್ ಗೌರವ ಅಧ್ಯಕ್ಷ ಎಂ. ಶಿವಣ್ಣ ಮಾತನಾಡಿ, ದೀಪಾವಳಿ ಮತ್ತು ಕಾರ್ತಿಕ ಮಾಸದ ಐದನೇ ದಿನವಾದ ಇಂದು ದೇವಾಲಯದ ಭಕ್ತರಾದ ಕಾಮಟಗೇರಿಯ ಶ್ರೀನಿವಾಸ ಕುಟುಂಬದವರು ಮಲೆ ಮಹದೇಶ್ವರ ಸ್ವಾಮಿಯ ಪ್ರಾಣ ಲಿಂಗಕ್ಕೆ ಬೆಣ್ಣೆ ಅಲಂಕಾರ ಮತ್ತು ವಿಶೇಷ ಹೂವಿನ ಅಲಂಕಾರ ಮಾಡಿಸಿದ್ದಾರೆ. 40ನೇ ವರ್ಷದ ಮಹಾ ಅನ್ನ ಸಂತರ್ಪಣೆ ನಡೆಯುತ್ತಿದೆ. ಅನ್ನ ಸಂತರ್ಪಣೆಗೆ ನೂರಾರು ಜನ ಸಹಕಾರ ಮಾಡಿದ್ದಾರೆ ಎಂದರು.

ಸಾಂಸ್ಕøತಿಕ ಕಾರ್ಯಕ್ರಮದ ಜತೆಗೆ ರಂಗೋಲಿ ಸ್ಪರ್ಧೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನೂ ನಡೆಸುತ್ತಿದ್ದೇವೆ. ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ನಡೆಯುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಮದ್ಯಾಹ್ನ 2 ಗಂಟೆಗೆ ಭಜನಾ ಕಾರ್ಯಕ್ರಮ ಮತ್ತು ಸಂಜೆ 6 ಗಂಟೆಗೆ ಸಂಗೀತ ಸುಧೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು. 
ಶನಿಮಹಾತ್ಮ ದೇವಾಲಯದ ಗುಡ್ಡಪ್ಪ 
ಪುಟ್ಟಸ್ವಾಮಪ್ಪ,  ಮಲೆ ಮಹದೇಶ್ವರ ಸ್ವಾಮಿ ಗುಡ್ಡಪ್ಪ ರವಿಕುಮಾರ್ ಇನ್ನಿತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು