ಶಾಸಕರು, ಸಚಿವರು ರೈತ ದ್ರೋಹಿಗಳು, ಸಕ್ಕರೆ ಕಾರ್ಖಾನೆ ಮಾಲೀಕರ ಗುಲಾಮರಾಗಿರುವ ಬಗ್ಗೆ ಅನುಮಾನ : ಕುರುಬೂರು ಶಾಂತಕುಮಾರ್ ಆಕ್ರೋಶ

ಹಾರ್ಮೋನಿಯಂ ಬಾರಿಸಿ ಸರ್ಕಾರದ ವಿರುದ್ಧ ಸಂಗೀತ ಸಮರ ಸಾರಿದ
ಕುರುಬೂರು 

ಮೈಸೂರು : ಕಬ್ಬಿನ ಬೆಲೆ ನಿಗದಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟರೂ ಯಾವೊಬ್ಬ ಶಾಸಕರಾಗಲೀ ಅಥವಾ ಸಚಿವರಾಗಲೀ ಸ್ಥಳಕ್ಕೆ ಭೇಟಿ ನೀಡಿ ಮಾತನಾಡದಿರುವುದು ನೋಡಿದರೆ ಇವರೆಲ್ಲಾ ರೈತ ದ್ರೋಹಿಗಳು, ಸಕ್ಕರೆ ಕಾರ್ಖಾನೆ ಮಾಲೀಕರ ಗುಲಾಮgರಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭಾನುವಾರ ವಾದ್ಯಗೋಷ್ಠಿ ಸಮೇತ ಸರ್ಕಾರವನ್ನು ಅಣಕಿಸುವ ಹಾಡುಗಳನ್ನು ಹಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಎಸ್.ಟಿ.ಸೋಮಶೇಖರ್ ಇದುವರೆಗೂ ಜಿಲ್ಲೆಯ ರೈತರ ಕುಂದು ಕೊರತೆ ಸಭೆ ನಡೆಸಿಲ್ಲ. ಸೌಜನ್ಯಕ್ಕಾದರೂ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಲಿಲ್ಲ. ಇಂತಹ ಸಚಿವರಿರುವಾಗ ರೈತರು ಭಜನೆ ಮಾಡದೆ ಇನ್ನೇನು ಮಾಡಲು ಸಾಧ್ಯ ಹೇಳಿ ಎಂದು ಪ್ರಶ್ನಿಸಿದರು.
ಕಳೆದ ನಾಲ್ಕು ತಿಂಗಳಿನಿಂದ ಕಬ್ಬು ಬೆಳೆಗಾರರು ನಮಗೆ ನೀಡುವ ಕಬ್ಬಿನ ದರದಲ್ಲಿ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಿದ್ದರೂ ಇದರ ಬಗ್ಗೆ ಯಾವುದೇ ಮಾತನಾಡಿಲ್ಲ.  
ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಕಬ್ಬು ಬೆಳೆಗಾರರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದರು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕುರುಬೂರು ಬೇಸರ ವ್ಯಕ್ತಪಡಿಸಿದರು.
ಶಾಸಕರ ಸಂಬಳ ಹೆಚ್ಚಿಸುವಾಗ ಯಾವುದೇ ಚರ್ಚೆ ಮಾಡೋದಿಲ್ಲ. ಅದೇ ರೀತಿ ಅನ್ನದಾತ ರೈತನ ಬೇಡಿಕೆ ಈಡೇರಿಸಲು ಇವರಿಗೆ ಆಗಲ್ಲ. ಇವರೆಲ್ಲಾ ರೈತ ದ್ರೋಹಿಗಳು. ಸಕ್ಕರೆ ಕಾರ್ಖಾನೆ ಮಾಲಿಕರ ಗುಲಾಮರಾಗಿರುವ ಬಗ್ಗೆ ಅನುಮಾನವಿದೆ ಎಂದು ಕಿಡಿ ಕಾರಿದರು.
ದೇಶದಲ್ಲಿ ಬಹುದೊಡ್ಡ ಶುಗರ್ ಮಾಫಿಯಾ ಇದೆ. ಇದು ಕಬ್ಬು ಬೆಳೆಗಾರರನ್ನು ನಾಶ ಮಾಡುತ್ತಿದೆ. ಜನಪ್ರತಿನಿಧಿಗಳು ಈ ಮಾಫಿಯಾ ಬಲೆಯಲ್ಲಿ ಬಿದ್ದಂತೆ ಕಾಣುತ್ತಿದೆ, ಇಂದು ನಮ್ಮನ್ನ ಮುಖವಾಡದ ಸರ್ಕಾರ ಆಳುತ್ತಿದೆ. ಕಾಣದ ಕೈಗಳು ಸರ್ಕಾರವನ್ನು ದಿಕ್ಕು ತಪ್ಪಿಸುತ್ತಿವೆ. ಆದ್ದರಿಂದಲೇ ರೈತರು ಸಂಕಷ್ಟ ಪಡುವಂತಾಗಿದೆ ಎಂದರು.
ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್,      ಚುಂಚರಾಯನಹುಂಡಿ ಮಂಜು, ಸಿದ್ದರಾಮು, ನಂಜುಂಡಸ್ವಾಮಿ, ಮಲ್ಲಪ್ಪ, ಮಹದೇವಸ್ವಾಮಿ, ಮಹದೇವಪ್ಪ, ಶಿವಮೂರ್ತಿ, ಕಾಳಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ, ಕೆಆರ್‍ಎಸ್ ರಾಮೇಗೌಡ, ಅಂಬಳೆ ಮಂಜುನಾಥ್ ಇತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು