ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಅಖಿಲ ಭಾರತ ರೈತ, ಕೃಷಿ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ
ನವೆಂಬರ್ 05, 2022
ಮೈಸೂರು : ರಾಜ್ಯದಲ್ಲಿ ಭೂಮಿ ಇಲ್ಲದ ಸಾವಿರಾರು ರೈತರು ಬೀಳು ಬಿದ್ದಿದ್ದ ಸರ್ಕಾರಿ ಅರಣ್ಯದಂಚಿನ ಜಮೀನಿನಲ್ಲಿ ಹತ್ತಾರು ವರ್ಷ ಬೆವರು ಸುರಿಸಿ ಜಮೀನು ಮಟ್ಟ ಮಾಡಿಕೊಂಡು ಉಳುಮೆ ಮಾಡುತ್ತಿದ್ದು, ಇಂತಹ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ, ಕೃಷಿ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ನಗರದ ಜೆಎಸ್‍ಎಸ್ ವಿದ್ಯಾಪೀಠ ಸಮೀಪದಿಂದ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಸಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬೀಳು ಬಿದ್ದಿದ್ದ ಸರ್ಕಾರಿ ಜಮೀನಿನಲ್ಲಿ ಬೆಳೆದಿದ್ದ ಕುರುಚಲು ಗಿಡ, ಕಲ್ಲುಗಳನ್ನು ಹೆಕ್ಕಿ ಹಗಲು ರಾತ್ರಿ ಬೆವರು ಸುರಿಸಿ ಭೂಮಿ ಹಸನು ಮಾಡಿ, ಅದನ್ನು ಕೃಷಿಯೋಗ್ಯವನ್ನಾಗಿಸಿ ದೇಶದ ಆಹಾರೋತ್ಪಾದನೆಗೆ ಕಾಣಿಕೆ ನೀಡುವಲ್ಲಿ ರೈತರ ಪರಿಶ್ರಮ ಅಗಾಧವಾದುದು. ಇದನ್ನು ಸರ್ಕಾರ ಸ್ಮರಿಸಬೇಕು. ರೈತರು ತಮ್ಮ ಜೀವನೋಪಾಯಕ್ಕಾಗಿ ಸುಮಾರು 80-90 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಾ ಬರುತ್ತಿದ್ದಾರೆ. ಇವರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಇಲ್ಲಿಯವರೆಗೆ ಆಳ್ವಿಕೆ ಮಾಡಿದ ಎಲ್ಲ ಸರ್ಕಾರಗಳಿಗೂ ಈ ಬಡ ಜನರ ಜೀವನದ ವಸ್ತುಸ್ಥಿತಿ ತಿಳಿದಿದ್ದು ಸರ್ಕಾರಕ್ಕೆ ಸೇರಿದ ಈ ಜಮೀನಿನಲ್ಲಿ ಉಳುಮೆಗೆ ಅವಕಾಶವೀಯುತ್ತಾ ಬಂದಿವೆ. ಆದರೆ ಸದರಿ ಸರ್ಕಾರಗಳು ಇಲ್ಲಿಯವರೆವಿಗೂ ಉಳುಮೆಗೆ ಅವಕಾಶವೀಯುತ್ತಾ ಬಂದಿದ್ದರೂ ಸಾಗುವಳಿದಾರರಿಗೆ ಹಕ್ಕು ಪತ್ರವನ್ನು ನೀಡಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳದಿರುವುದರಿಂದ, ಶಾಸನಬದ್ದವಾಗಿ ಭೂಮಿಯ ಹಕ್ಕು ದೊರೆಯದೆ ಬಡ ರೈತರು ಸಮಾಜದಲ್ಲಿನ ಇತರೆ ಜನರಂತೆ ನಿಶ್ಚಿತ ಜೀವನ ರೂಪಿಸಿಕೊಳ್ಳಲಾಗದೆ ದಶಕಗಳಿಂದ ತೀವ್ರ ಮಾನಸಿಕ ತೊಳಲಾಟದಲ್ಲಿದ್ದು, ಜರ್ಜರಿತರಾಗಿದ್ದಾರೆ. ಅಲ್ಲದೆ ಅವರ ಕುಟುಂಬ ಹಾಗೂ ಮಕ್ಕಳ ಭವಿಷ್ಯವು ತೀವ್ರ ಅಭದ್ರತೆಯಿಂದ ಕೂಡಿದೆ. ಈ ಸಾಗುವಳಿದಾರರು ಬಡವರಾಗಿದ್ದು ಕೃಷಿಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ ಎಂದು ಪ್ರ ತಿಭಟನಾಕಾರರು ದೂರಿದರು. ಸರ್ಕಾರದ ಕಂದಾಯ ಇಲಾಖೆಯ ಹೊಸ ಹೊಸ ನೀತಿ ಮತ್ತು ಅರಣ್ಯ ಇಲಾಖೆಯ ದಾಳಿಗಳಿಂದ ರೈತರು ಸಾಗುವಳಿ ಮಾಡುವುದೇ ದುಸ್ತರವಾಗಿದೆ. ಕಂದಾಯ ಇಲಾಖೆಗೆ ಸೇರಿದ್ದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡುತ್ತಿಲ್ಲ ಮತ್ತು ಅರಣ್ಯ ಇಲಾಖೆಯವರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ತಮ್ಮದೆಂದು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವ ಬದಲು, ಅರಣ್ಯ ಇಲಾಖೆಗೆ ಸೇರಿದ್ದು ಎಂದು ನೆಪವೊಡ್ಡಿ ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ಸರ್ಕಾರ ಇತ್ತೀಚೆಗೆ “ಪರಿಭಾವಿತ ಅರಣ್ಯ” ವೆಂದು ತಪ್ಪಾಗಿ ಗುರುತಿಸಿದ್ದ 7,73,326.91 ಹೆಕ್ಟರ್ ಭೂಮಿಯನ್ನು ಹಿಂದಿನ ಸ್ವರೂಪದಲ್ಲಿಯೆ ಮುಂದುವರೆಸಬೇಕು ಎಂದು ಅದೇಶವನ್ನು ಮಾಡಿದೆ. ಗೋಮಾಳವು ಸೇರಿದಂತೆ ಕಂದಾಯ ಇಲಾಖೆಯಡಿ ಬರುವ ಹಾಗೂ ಅರಣ್ಯ ಇಲಾಖೆಗೆ ಸೇರಿದೆ ಎಂದು ಹೇಳಿಕೊಂಡ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗೆ ಪಕ್ಕು ಪತ್ರವನ್ನು ಕೂಡಲೇ ವಿತರಿಸಬೇಕು ಮತ್ತು ದುರಸ್ತ್/ಫೋಡ್ ಮಾಡಿ ಖಾತೆ ಮಾಡಿ ಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಮನವಿ ಪತ್ರವನ್ನು ಸ್ವೀಕರಿಸಿದ ತಹಸಿಲ್ದಾರು ಒಂದು ತಿಂಗಳ ಒಳಗಾಗಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೇ ನಡೆಸಿ ನಂತರ ಹಕ್ಕು ಪತ್ರಗಳನ್ನು ವಿತರಿಸುತ್ತೇವೆ ಹಾಗೂ ಅನುಭೋಗದಲ್ಲಿರುವ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಇಂದಾಗಲಿ ಯಾರಿಂದಾಗಲಿ ತೊಂದರೆ ಬರುವುದಿಲ್ಲ ಒಕ್ಕಲೆಬಿಸಲು ಸಾಧ್ಯವಿಲ್ಲ ಎಂದು ನೆರೆದಿದ್ದ ಸಾಗುವಳಿದಾರರಿಗೆ ಭರವಸೆ ನೀಡಿದರು. ಹೆಚ್.ಪಿ ಶಿವಪ್ರಕಾಶ್ ಮತ್ತು ಹೆಚ್.ಎಂ ಬಸವರಾಜು ನೇತೃತ್ವದಲ್ಲಿ ಗ್ರಾಮ ಮುಖಂಡರುಗಳ ಒಂದು ನಿಯೋಗವು ಭೂ ಮಂಜೂರಾತಿ ಸಮಿತಿಯೊಡನೆ ಮಾತುಕತೆ ನಡೆಸಿತು. ಸಮಿತಿಯ ಅಧ್ಯಕ್ಷರಾದ ಶಾಸಕರು ಜಂಟಿ ಸರ್ವೇ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಂದಿನ ತಿಂಗಳಲ್ಲಿ ಮತ್ತೆ ಸಭೆ ನಡೆಸಿ ಗುಮಚನಹಳ್ಳಿ, ಚಿಕ್ಕನಹಳ್ಳಿ, ಹಾರೋಹಳ್ಳಿ, ಮಾವಿನಹಳ್ಳಿ ಗಳ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್‍ನ ರಾಜ್ಯ ನಾಯಕರಾದ ಎಸ್.ಎನ್ ಸ್ವಾಮಿ, ಹೆಚ್.ಪಿ.ಶಿವಪ್ರಕಾಶ್, ಮೈಸೂರು ಜಿಲ್ಲಾ ಸಂಘಟನಾಕಾರರಾದ ಬಸವರಾಜು. ಹೆಚ್.ಎಂ ರೈತರಾದ ಗುಮಚನಹಳ್ಳಿಯ ಗೋವಿಂದನಾಯಕ, ಮರಿಚೌಡನಾಯಕ, ಹರೀಶ್, ಸೋಮಶೇಖರ್, ಚೌಡನಾಯಕ, ಹಾರೋಹಳ್ಳಿಯ ಪಾಪೇಗೌಡ, ಬಸವೇಗೌಡ, ಚಂದ್ರು, ರವಿ, ಮಾವಿನಹಳ್ಳಿಯ ಸಿದ್ದೇಶ್, ಬಸವರಾಜು, ಸಿದಯ್ಯ, ಜಯಪುರ ಗ್ರಾಮದ ಬಸವೇಲಿಂಗೇಗೌಡ, ಮಹೇಶ್ ಮುಂತಾದವರು ಭಾಗವಹಿಸಿದರು.
0 ಕಾಮೆಂಟ್‌ಗಳು