ಮೈಸೂರು : ನಗರದ ರಿಂಗ್ ರಸ್ತೆಯ ಯರಗನಹಳ್ಳಿ ಪಾಪಯ್ಯ ಲೇ ಔಟ್ ನಲ್ಲಿನ ಮೈಸೂರ್ ಮೆಟ್ರೋ ಎಂ.ಸ್ಯಾಂಡ್ ಡಿಪೋ ಸೇರಿದಂತೆ ಸುಮಾರು 9 ಕಡೆಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ನಡೆಯುತ್ತಿರುವ ಕಳಪೆ ಗುಣಮಟ್ಟದ ಎಂ.ಸ್ಯಾಂಡ್, ಜಲ್ಲಿ ಮತ್ತಿತರ ಕಟ್ಟಡ ಸಾಮಾಗ್ರಿ ಮಾರಾಟ ಕೇಂದ್ರಗಳನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಲಾರಿ ಮತ್ತು ಟಿಪ್ಪರ್ ಚಾಲಕರು ಮತ್ತು ಮಾಲಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಯಿತು.
ಯರಗನಹಳ್ಳಿ ಸ್ಮಶಾನದ ಸಮೀಪವಿರುವ ಮೈಸೂರ್ ಮೆಟ್ರೋ ಎಂ.ಸ್ಯಾಂಡ್ ಡಿಪೋ ಎದುರು ಜಮಾಯಿಸಿದ ನೂರಾರು ಲಾರಿ, ಟಿಪ್ಪರ್ ಚಾಲಕರು ಮತ್ತು ಮಾಲಿಕರು ಗಣಿ ಅಧಿಕಾರಿಗಳು ಮತ್ತು ಮಹಾನಗರಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಸ್ಥಳಕ್ಕೆ ಆಗಮಿಸಿದ್ದ ರೈತಸಂಘದ(ರೈತಬಣ) ಅಧ್ಯಕ್ಷ ಇ.ಎನ್.ಕೃಷ್ಣೇಗೌಡ ಮಾತನಾಡಿ, ಇಂತಹ ಅಕ್ರಮ ಕಟ್ಟಡ ಸಾಮಾಗ್ರಿ ಮಾರಾಟ ಕೇಂದ್ರಗಳಿಂದ ಲಾರಿ ಮತ್ತು ಟಿಪ್ಪರ್ ಬಾಡಿಗೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಚಾಲಕರು ಮತ್ತು ಮಾಲಿಕರು ಇಂದು ಬೀದಿಗೆ ಬಿದ್ದಿದ್ದಾರೆ. ಲಾರಿ ಮತ್ತು ಟಿಪ್ಪರ್ ಗಳನ್ನು ಸಾಲವಾಗಿ ಪಡೆದಿರುವವರು ಸಾಲದ ಕಂತುಗಳನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಇದರಿಂದ ಇವರ ಸಂಸಾರ ನಿರ್ವಹಣೆಯೂ ಕಷ್ಟವಾಗಿದೆ. ಇದರ ಜತೆ ಹಲವೆಡೆ ಗಣಿಗಾರಿಕೆಯೂ ಸ್ಥಗಿತಗೊಂಡಿರುವ ಕಾರಣ ಟಿಪ್ಪರ್ ಮಾಲಿಕರು ಮತ್ತು ಚಾಲಕರ ಬದುಕು ಅತಂತ್ರವಾಗಿದೆ ಇಂತಹ ಸಂದರ್ಭದಲ್ಲಿ ನಗರದಲ್ಲಿ ಹಲವಾರು ಕಡೆ ಬೃಹತ್ ಮಟ್ಟದ ಅಕ್ರಮ ಎಂ.ಸ್ಯಾಂಡ್, ಜಲ್ಲಿ ಸೇರಿದಂತೆ ಇನ್ನಿತರ ಕಟ್ಟಡ ಸಾಮಾಗ್ರಿಗಳ ಮಾರಾಟ ಜಾಲಗಳು ಹುಟ್ಟಿಕೊಂಡು ಟಿಪ್ಪರ್ ಮಾಲಿಕರು ಮತ್ತು ಚಾಲಕರ ಬದುಕನ್ನು ಕಿತ್ತುಕೊಂಡಿವೆ. ಕೂಡಲೇ ಇವುಗಳನ್ನು ತೆರವು ಮಾಡಬೇಕು ಇಲ್ಲದಿದ್ದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ಮತ್ತು ಮೈಸೂರು ಮಹಾನಗರಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಎನ್.ರಾಜೇಂದ್ರ ಮಾತನಾಡಿ, ಮೈಸೂರು ಮೆಟ್ರೋ ಎಂ.ಸ್ಯಾಂಡ್ ಡಿಪೋ ದವರು ಸಾಮಾಜಿಕ ಜಾಲತಾಣ ಮತ್ತು ಕರಪತ್ರಗಳ ಮೂಲಕ ಕಡಿಮೆ ಬೆಲೆಗೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ನೀಡುವುದಾಗಿ ಗ್ರಾಹಕರನ್ನು ಆಕರ್ಷಿಸಿ ಕಳಪೆ ಗುಣಮಟ್ಟದ ಎಂ.ಸ್ಯಾಂಡ್ ಮತ್ತಿತರ ಕಟ್ಟಡ ನಿರ್ಮಾಣ ವಸ್ತುಗಳನ್ನು ಮಾರುತ್ತಿದ್ದಾರೆ. ತೂಕದಲ್ಲೂ ಜನರಿಗೆ ಮೋಸ ಮಾಡುತ್ತಿದ್ದಾರೆ. ಕೇವಲ ಕಡಿಮೆ ಬೆಲೆ ಎಂದು ಇವರ ಆಕರ್ಷಣೆಗೆ ಒಳಗಾದ ಗ್ರಾಹಕರು ತಮಗೆ ಅರಿವಿಲ್ಲದಂತೆ ನಷ್ಟ ಅನುಭವಿಸುತ್ತಿದ್ದು, ಈ ಬಗ್ಗೆ 3 ತಿಂಗಳ ಹಿಂದೆಯೇ ಗಣಿ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಬೃಹತ್ ಮಾರಾಟ ಕೇಂದ್ರಗಳಿಂದ ನಮ್ಮಂತಹ ಸಣ್ಣ ಪುಟ್ಟ ಲಾರಿ ಮಾಲಿಕರು ಮತ್ತು ಚಾಲಕರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತಿದೆ.
ನಮಗೆ ವಾಹನಗಳ ಇಎಂಐ, ಟ್ಯಾಕ್ಸ್, ವಿಮೆ ವಾಹನಗಳ ಖರ್ಚು, ವೆಚ್ಚಗಳನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಇನ್ನು ನಮ್ಮ ಸಂಸಾರ ನಿರ್ವಹಣೆಗೂ ತೊಂದರೆಯಾಗಿದೆ. ಇವರು 30 ರಿಂದ 40 ಟನ್ ಭಾರ ಹೊರುವ ಬೃಹತ್ ಲಾರಿಗಳಲ್ಲಿ ಮಾಲುಗಳನ್ನು ಕುಣಿಗಲ್ ಮೂಲದಿಂದ ತಂದು ಇಲ್ಲಿ ಚಿಲ್ಲರೆ ಮಾರುತ್ತಿದ್ದಾರೆ. ಇವರಿಗೆ ತರಲು ಪರ್ಮಿಟ್ ಇದೆ ವಿನಹ ಮತ್ತೆ ಇಲ್ಲಿಂದ ಬೇರೆ ಕಡೆ ತುಂಬಲು ಪರ್ಮಿಟ್ ಇಲ್ಲ. ಗಣಿ ಇಲಾಖೆಯ ಅಧಿಕಾರಿಗಳ ಜತೆ ಶಾಮೀಲಾಗಿ ನಮ್ಮಂತಹ ಬಡ ಚಾಲಕರ ಬದುಕು ಬೀದಿಗೆ ತಂದಿದ್ದಾರೆ. ಕೂಡಲೇ ಇವುಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಛಾಯಾಸುತ, ಕಾರ್ಯದರ್ಶಿ ನಾಗಚಂದ್ರ, ಸಹ ಕಾರ್ಯದರ್ಶಿ ಮಹೇಶ್, ಕಾನೂನು ಸಲಹೆಗಾರರಾದ ಸಿದ್ದಯ್ಯ, ನಿರ್ದೇಶಕರಾದ ಮಹದೇವಸ್ವಾಮಿ, ಲೋಕೇಶ, ಮಂಜು, ಮಹದೇವ, ಶಂಕರ್, ಪ್ರಕಾಶ್, ಶಿವಣ್ಣ, ಪ್ರದೀಪ್, ಯೋಗೇಶ, ಮಲ್ಲೇಶ್, ಮುಖಂಡರಾದ ಪ್ರಶಾಂತ ಮುಂತಾದವರು ಇದ್ದರು.
0 ಕಾಮೆಂಟ್‌ಗಳು