ಖಾಕಿ ಸರ್ಪಗಾವಲಿನಲ್ಲಿ ``ಟಿಪ್ಪು ನಿಜ ಕನಸುಗಳು’’ ನಾಟಕ ಪ್ರದರ್ಶನ :

ಗೇಟ್ ಬಳಿ ನಿಂತು ಪ್ರೇಕ್ಷಕರನ್ನು ಗುರುತಿಸಿ ಒಳಗೆ ಬಿಡುತ್ತಿದ್ದ ರಂಗಾಯಣ ನಿರ್ದೇಶಕರು : ಫೋಟೋ ಜರ್ನಲಿಸ್ಟ್ ಜತೆ ವಾಗ್ವಾದ 

ಮೈಸೂರು : ವಿರೋಧ ಮತ್ತು ಪ್ರತಿಭಟನೆಯ ನಡುವೆಯೂ ಇಂದು ರಂಗಾಯಣದಲ್ಲಿ ಅಡ್ಡಂಡ ಕಾರ್ಯಪ್ಪ ಬರೆದ ``ಟಿಪ್ಪು ನಿಜ ಕನಸುಗಳು’’ ನಾಟಕ ಭಾರಿ ಪೊಲೀಸ್ ಬಂದೋಬಸ್ತ್‍ನಲ್ಲಿ ಪ್ರದರ್ಶನಗೊಂಡಿತು.
ರಂಗಾಯಣ ಸುತ್ತಲೂ ಖಾಕಿ ಸರ್ಪಗಾವಲು ಹಾಕಲಾಗಿತ್ತು. `ಅತಿಥಿಗಳು, ಉದ್ಘಾಟನೆ, ಭಾಷಣ ಮುಂತಾದವುಗಳಿಗೆ ಅವಕಾಶವಿಲ್ಲ. ಗಂಟೆ ಹೊಡೆದೊಡನೆ ನೇರವಾಗಿ ನಾಟಕ ಪ್ರದರ್ಶನ ನಡೆಯುತ್ತದೆ. ಪತ್ರಿಕಾ ಛಾಯಾಚಿತ್ರಗಾರರು ಪದೇ ಪದೇ ನಾಟಕ ಪ್ರದರ್ಶನದ ಮಧ್ಯೆ ಓಡಾಡಿ ಪ್ರೇಕ್ಷಕರಿಗೆ ತೊಂದರೆ ನೀಡುತ್ತಾರೆ. ಜತೆಗೆ ಪತ್ರಕರ್ತರು ಕೇವಲ ಗೊಂದಲಗಳನ್ನು ಹುಡುಕುತ್ತಾರೆ. ಅದಕ್ಕಾಗಿ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಗೆ ಅವಕಾಶ ನೀಡಿಲ್ಲ. 209 ಸೀಟುಗಳಿವೆ. ಅಷ್ಟೂ ಟಿಕೇಟ್ ನೀಡಲಾಗಿದೆ. ನಿಮ್ಮನ್ನು ಎಲ್ಲಿ ಕೂರಿಸಲಿ. ಬೇಕಿದ್ದರೇ ಹಾಗೆ ಬರೆದುಕೊಳ್ಳಿ ಎಂದು ರಂಗಾಯಣ ನಿರ್ದೇಶಕ ಹಾಗೂ ಇಂದು ಪ್ರದರ್ಶನಗೊಂಡ ನಾಟಕ ರಚನಾಕಾರ ಅಡ್ಡಂಡ ಕಾರ್ಯಪ್ಪ ಅವರು ನಗರದ ಪತ್ರಿಕಾ ಛಾಯಾಚಿತ್ರಗಾರರ ಜತೆ ವಾಗ್ವಾದ ನಡೆಸಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದಾಗ್ಯೂ ಆಯ್ದ ಪತ್ರಕರ್ತರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು ಎನ್ನಲಾಗಿದೆ. ಸ್ವತಃ ರಂಗಾಯಣ ನಿರ್ದೇಶಕರೇ ಗೇಟ್ ಬಳಿ ನಿಂತು ಪ್ರೇಕ್ಷರನ್ನು ಗುರುತಿಸಿ ಒಳಗೆ ಬಿಡುತ್ತಿದ್ದರು. ರಂಗಾಯಣದ ಇತಿಹಾಸದಲ್ಲೇ ಇಂತಹ ಪ್ರಸಂಗ ನಡೆದಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು ಕಂಡುಬಂತು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು