ಹಣ ಕೊಟ್ಟವರಿಗೆ ಮಾತ್ರ ಇಲ್ಲಿ ಟ್ರೀಟ್‍ಮೆಂಟ್ : ಕೊಡದಿದ್ದರೆ ಮುಟ್ಟಿಯೋ ನೋಡದ ವೈದ್ಯರು
-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಪಿಜಿ ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ವೈದ್ಯಕೀಯ ಸೇವೆ ದೊರಕುತ್ತಿಲ್ಲ ಎಂದು ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಇಂದು ಗ್ರಾಮಸ್ಥರ ಜತೆಗೂಡಿ ಆ ಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಬುಧವಾರ ಬೆಳಿಗ್ಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಆರೋಗ್ಯ ಸಚಿವರು, ಶಾಸಕರು ಮತ್ತು ವೈದ್ಯರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪಿಜಿ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಚಿಕಿತ್ಸೆ ನೀಡುವಲ್ಲಿ ತಾರತಮ್ಯ ಮಾಡುತ್ತಾರೆ. ಹಣ ಕೊಟ್ಟರೆ ಮಾತ್ರ ಇಲ್ಲಿ ಚಿಕಿತ್ಸೆ ಇಲ್ಲದಿದ್ದರೆ ಮುಟ್ಟಿಯೂ ನೋಡಲ್ಲ. ಮಾತೆತ್ತಿದರೆ ಆ ಸ್ಕ್ಯಾನಿಂಗ್, ಈ ಸ್ಕ್ಯಾನಿಂಗ್ ಅಂತಾ ಚೀಟಿ ಬರೆದು ಖಾಸಗಿ ಲ್ಯಾಬ್‍ಗಳಿಗೆ ಕಳಿಸುತ್ತಾರೆ. ಇದುವರೆಗೂ ಯಾವ ರೋಗಿಯನ್ನು ಕನಿಷ್ಟ ಕುಳಿತುಕೊಳ್ಳಿ ಎಂದು ಹೇಳಿ ಪರೀಕ್ಷೆ ಮಾಡಿಲ್ಲ. ಕೂಡಲೇ ಇಲ್ಲಿನ ವೈದ್ಯರನ್ನು ಅಮಾನತ್ತು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸುತ್ತಮುತ್ತಲಿನ ಗ್ರಾಮದ ಬಡ ಜನರು ಈ ಆಸ್ಪತ್ರೆಯನ್ನೇ ನಂಬಿದ್ದಾರೆ. ರಾತ್ರಿ ವೇಳೆಯಲ್ಲಂತೂ ಯಾರು ನೋಡೋದಿಲ್ಲ. ಅಕಸ್ಮಾತ್ ಹೆರಿಗೆ ನೋವೆಂದು ಬಂದರೆ ಚಾಮರಾಜನಗರಕ್ಕೆ ಹೋಗಿ ಎನ್ನುತ್ತಾರೆ. ನೂರು ಹೆರಿಗೆ ಕೇಸ್‍ನಲ್ಲಿ ತೊಂಭತೈದು ಚಾಮರಾಜನಗರಕ್ಕೆ ಹೋಗುತ್ತವೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಇನ್ನು ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಆಂಬುಲೆನ್ಸ್ ಇದೆ. ಆದರೆ ವರ್ಷದಿಂದಲೂ ಇದು ಚಾಲಕನಿಲ್ಲದೆ ಹಾಗೆಯೇ ನಿಂತಿದೆ. ಈ ಬಗ್ಗೆ ಈ ಭಾಗದ ಶಾಸಕರಾಗಲೀ, ತಾಲ್ಲೂಕು, ಜಿಲ್ಲಾ ಆರೋಗ್ಯಾಧಿಕಾರಿಗಳಾಗಲೀ ತಲೆ ಕೆಡಿಸಿಕೊಂಡಿಲ್ಲ. ಇತ್ತೀಚೆಗೆ ಈ ಭಾಗದಲ್ಲಿ ನಡೆದ ಅಪಘಾತದಲ್ಲಿ ಆಂಬುಲೆನ್ಸ್ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಆಗದೆ ನಾಲ್ಕು ಜನ ಪ್ರಾಣ ಬಿಟ್ಟರು ಎಂದು ಪ್ರತಿಭಟನಾಕಾರರು ವಿವರಿಸಿದರು.
ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಗೆ ಬರುವ ವೈದ್ಯರು 3 ಗಂಟೆಗೆ ಜಾಗ ಖಾಲಿ ಮಾಡುತ್ತಾರೆ. ನಮಗೆ ಇಲ್ಲಿಯೇ ಉಳಿದುಕೊಳ್ಳುವ ವೈದ್ಯರು ಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
0 ಕಾಮೆಂಟ್‌ಗಳು