ಮೈಸೂರು : ಚಿನ್ನ-ಬೆಳ್ಳಿ ಪದಾರ್ಥಗಳ ಗಿರವಿ ಅಂಗಡಿ ಮಾಲೀಕ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಪರಾರಿ ಆಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಇಲ್ಲಿನ ವಿವೇಕಾನಂದ ವೃತ್ತದಲ್ಲಿರುವ ಮಾರುತಿ ಪಾನ್ ಮತ್ತು ಜ್ಯುವೆಲ್ಲರಿ ಶಾಪ್ ಮಾಲೀಕ ನೇಮಿರಾಮ (50) ಎಂಬಾತನೇ ಜನರಿಗೆ ಕೋಟ್ಯಾಂತರ ರೂ.ವಂಚಿಸಿ ಪರಾರಿಯಾದವನಾಗಿದ್ದಾನೆ. ಈತ ಕಳೆದ ಏಳೆಂಟು ವರ್ಷದಿಂದ ವಿವೇಕಾನಂದ ನಗರದಲ್ಲಿ ಮಾರುತಿ ಗಿರವಿ ಅಂಗಡಿ ನಡೆಸುತ್ತಿದ್ದು, ಕಷ್ಟವೆಂದು ಬಂದ ಗ್ರಾಹಕರಿಂದ ಚಿನ್ನಬೆಳ್ಳಿ ಪದಾರ್ಥಗಳನ್ನು ಅಡವಿರಿಸಿಕೊಂಡು ಹಣ ನೀಡುತ್ತಿದ್ದನು. ಕೊರೋನಾ ಸಂದರ್ಭದಲ್ಲಿ ಹೇರಿದ್ದ ಲಾಕ್ ಡೌನ್ ಬಳಿಕ ನೇಮಿನಾಮ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದನು. ತನ್ನ ಶ್ರೀರಾಂಪುರದಲ್ಲಿರುವ ನಿವಾಸವನ್ನು ಮೂವರಿಗೆ ಮೋಸದಿಂದ ಅಗ್ರಿಮೆಂಟ್ ಮಾಡಿಸಿ ಹಣ ಪಡೆದಿದ್ದಲ್ಲದೇ, ಮತ್ತೋರ್ವ ವ್ಯಕ್ತಿಗೂ ನೋಂದಣಿ ಮಾಡಿಸಿಕೊಟ್ಟು ಹಣ ಪಡೆದಿದ್ದನು. ಈತ ಸೋಮವಾರ ರಾತ್ರೋ ರಾತ್ರಿ ತನ್ನ ಬಳಿ ಗಿರವಿ ಇಟ್ಟಿದ್ದ ಚಿನ್ನ-ಬೆಳ್ಳಿಯ ಪದಾರ್ಥಗಳು, ಹಣದ ಜೊತೆ ಕುಟುಂಬ ಸಮೇತ ಊರನ್ನೇ ಬಿಟ್ಟು ಪರಾರಿಯಾಗಿದ್ದಾನೆ. ಸುಮಾರು 80 ಕೋಟಿ ರೂಪಾಯಿ ತನಕ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಆತನ ಬಳಿ ಗಿರವಿ ಇಟ್ಟ ಗ್ರಾಹಕರು ಬಂದು ತಮ್ಮ ಚಿನ್ನ ಮತ್ತು ಬೆಳ್ಳಿಯ ಪದಾರ್ಥಗಳನ್ನು ಕಳೆದು ಕೊಂಡಿದ್ದಕ್ಕೆ ಗೋಳಾಡುತ್ತಿದ್ದಾರೆ. ಇತ್ತ ಮನೆ ಖರೀದಿಗೆ ಮುಂದಾದವರು ಹಣವೂ ಇಲ್ಲದೆ, ಮನೆಯೂ ಇಲ್ಲದೆ ಕಣ್ಣೀರಿಡುತ್ತಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪೊಲೀಸರು ವಂಚಕನ ಪತ್ತೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
0 ಕಾಮೆಂಟ್‌ಗಳು