ಬಿಜೆಪಿ ವರಿಷ್ಠರು ಟಿಕೇಟ್ ನೀಡಿದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಮಲ ಅರಳಿಸುವುದು ಗ್ಯಾರಂಟಿ : ಜಗದೀಶ್ ಗೌಡ ವಿಶ್ವಾಸ

ಮೈಸೂರು : 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ನನಗೆ ಟಿಕೇಟ್ ನೀಡಿದ್ದೇ ಆದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಮಲ ಅರಳಿಸುವುದು ಗ್ಯಾರಂಟಿ ಎಂದು ಬಿಜೆಪಿ ಮುಖಂಡ ಜಗದೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು. 
ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನಾನು ಈ ಬಾರಿಯ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ. ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ನನಗೆ ಮತದಾರರ ಒಲವಿದೆ. ಟಿಕೇಟ್ ನೀಡಿದ್ದಲ್ಲಿ ಚಾಮುಂಡೇಶ್ವರಿಯಲ್ಲಿ ಖಂಡಿತಾ ಕಮಲ ಅರಳುತ್ತದೆ ಎಂದರು.  
ಹಾಲಿ ಶಾಸಕ ಜಿ.ಟಿ. ದೇವೇಗೌಡರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗುವ ದ್ವಂಧ್ವ ನೀತಿಯಿಂದ ಮತದಾರರು ಮತ್ತು ಅವರದೇ ಪಕ್ಷದ ಕಾರ್ಯಕರ್ತರು ಬೇಸತ್ತಿದ್ದಾರೆ. ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆ ಸ್ಥಗಿತವಾಗಿದೆ, ಬಹಳಷ್ಟು ನೀರಾವರಿ ಯೋಜನೆಗಳು ಅಪೂರ್ಣವಾಗಿವೆ. ನಾನು ಶಾಸಕನಾದರೆ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ. ಜತೆಗೆ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿದ್ದು, ಪ್ರಾಧಿಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಯುವ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ನಗರಾಧ್ಯಕ್ಷ ಶ್ರೀವತ್ಸ ಎಲ್ಲರ ಬೆಂಬಲವೂ ನನಗಿದೆ ಎಂದು ಜಗದೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.   

ಇದಕ್ಕೂ ಮುನ್ನ ಜಗದೀಶ್ ಗೌಡ ಅವರ ಅಭಿಮಾನಿಗಳು ಪತ್ರಿಕಾಗೋಷ್ಠಿ ನಡೆಸಿ, ತಾಲೂಕಿನ ನಾಗನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಎನ್.ಎಂ. ಜಗದೀಶ್‍ಗೌಡ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. 

ಈ ವೇಳೆ ಅಭಿಮಾನಿ ಸಂಘದ ಅಧ್ಯಕ್ಷರಾದ ಯಶೋಧರಾಜ್ ಮಾತನಾಡಿ, ಜಗದೀಶ್‍ಗೌಡ ಅವರು ಕಳೆದ 34 ವರ್ಷಗಳಿಂದ ಸತತವಾಗಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಬಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ಕೊರೊನಾ ವೇಳೆ ಹಲವಾರು ಜನಸೇವೆ ಮಾಡಿದ್ದು, ಟಿಕೆಟ್ ನೀಡಿದಲ್ಲಿ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರ್ತಿ, ಶಿವಣ್ಣ, ಶಾಂತ, ಅರ್ಚನಾ ಹಾಜರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು