ಪಾಂಡವಪುರದಲ್ಲಿ ಅದ್ಧೂರಿಯಾಗಿ ಆರಂಭವಾದ "ಪುನೀತೋತ್ಸವ"

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಪ್ರಯುಕ್ತ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ‘ಪುನೀತೋತ್ಸವ’ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಒಂದು ಸಾವಿರ ವಿದ್ಯಾರ್ಥಿನಿಯರು ಸಾಮೂಹಿಕ ನಾಡಗೀತೆ ಹಾಡುವುದರ ಮೂಲಕ ಚಾಲನೆ ನೀಡಿದರು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಪಟ್ಟಣದ ಬಾಲಕಿಯರ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜಿನ ಸಾವಿರ ಹೆಣ್ಣುಮಕ್ಕಳು ಹಳದಿ ಸೀರೆ, ಕೆಂಪು ರವಿಕೆ ತೊಟ್ಟು ಸಾಲಾಗಿ ಶಿಸ್ತಿನಿಂದ ನಿಂತು ಸಾಮೂಹಿಕವಾಗಿ ಕುವೆಂಪು ಅವರ ‘ಭಾರತ ಜನನೀಯ ತನುಜಾತೆ’ ನಾಡಗೀತೆ ಹಾಡಿದರು. ಈ ಗೀತೆಗೆ ಸಭಿಕರು ಎದ್ದು ನಿಂತು ಗೌರವ ಸಲ್ಲಿಸಿದರು. ಬಳಿಕ ಹೆಣ್ಣು ಮಕ್ಕಳು ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡಿದರು.
ಪುನೀತ್ ರಾಜ್‌ಕುಮಾರ್ ಅವರ ‘ಬೊಂಬೆ ಹೇಳುತೈತೆ’ ಸೇರಿದಂತೆ ಮೂರು ಹಾಡುಗಳನ್ನು ಹಾಡಿದ ಹೆಣ್ಣುಮಕ್ಕಳು ಕ್ರೀಡಾಂಗಣದಲ್ಲಿ ನೆರೆದಿದ್ದ  ಅಪಾರ ಪ್ರೇಕ್ಷಕರನ್ನು ರಂಜಿಸಿದರು. ಈ ಹಾಡಿಗೆ ಯುವಕರು ಯುವತಿಯರು ಸಾಮೂಹಿಕವಾಗಿ ದನಿಗೂಡಿಸಿದರು. ಜನರು ಚಪ್ಪಾಳೆ ತಟ್ಟಿ ‘ಅಪ್ಪು ಅಪ್ಪು ’ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಎಂ.ಕೃಷ್ಣೇಗೌಡ  ಅವರನ್ನು ಸನ್ಮಾನಿಸಿ ಮಾತನಾಡಿದ ನಟ, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ, ಅಂಬರೀಷ್ ಅವರು ಎಂದೆಂದಿಗೂ ಮಂಡ್ಯದ ಜನತೆಯ ಮನದಲ್ಲಿದ್ದಾರೆ. ಅಂತೆಯೇ ಪುನೀತ್ ಅವರು ಎಂದೆಂದಿಗೂ ಅಮರ. ಸದ್ಯದಲ್ಲಿ ನಾನು ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ.  ರಾಜಕಾರಣದಲ್ಲಿ ಬಿಸಿಯಾಗಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ತರುವಲ್ಲಿ ನನ್ನ  ಜವಾಬ್ದಾರಿ ಹೆಚ್ಚಿದೆ. ಹಾಗಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.
ಅಂಬರೀಷ್ ಹಾಗೂ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪುನೀತೋತ್ಸವದಲ್ಲಿ ಅ‍ಪಾರ ಯುವಕರು ಯುವತಿಯರು,  ಅಭಿಮಾನಿಗಳು ಸೇರಿದ್ದರು.
ಚಿತ್ರ ನಟಿಯರಿಂದ ನೃತ್ಯ, ಹಾಡು ಕಾರ್ಯಕ್ರಮ ನಡೆಯಿತು. ಚಿತ್ರ ನಟಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.