ಶಾಸಕ ಸಿ.ಎಸ್.ಪುಟ್ಟರಾಜು ಅವರಿಂದ ಗುತ್ತಿಗೆದಾರರ ಕತ್ತು ಹಿಸುಕುವ ಕೆಲಸ : ರವೀಂದ್ರ ಆರೋಪ
ಪಾಂಡವಪುರ : ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಕ್ರಿಯವಾಗಿದೆ ಎಂದು ಮತದಾರರಿಗೆ ಮನವರಿಕೆ ಮಾಡಲು ಡಿ.1 ರಿಂದ ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮದ ಮೂಲಕ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ತೆರಳಲಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ತಿಳಿಸಿದರು.
ಪ್ರತಿದಿನ ಒಂದು ಗ್ರಾಮ ಪಂಚಾಯಿತಿಯಂತೆ 40 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಪ್ರಾರಂಭವಾದರೆ ಮಧ್ಯಾಹ್ನ 12 ಗಂಟೆಗೆ ವಿರಾಮ ಪಡೆದು ಮತ್ತೆ ಸಂಜೆ 4 ಗಂಟೆಗೆ ಪುನಾರಾರಂಭವಾಗುತ್ತದೆ. ನಾಲ್ಕು ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡಲಾಗುತ್ತಿದೆ. ದೇಹವೆ ದೇಗುಲ ಎಂಬ ಹೆಸರಿನಲ್ಲಿ ಕ್ಷೇತ್ರದ ಜನತೆಗೆ ಅಗತ್ಯವಿರುವ ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಒದಗಿಸಲಾಗುವುದು. ಅರಿವೇ ಗುರು ಎಂಬ ಹೆಸರಿನಲ್ಲಿ ಉತ್ತಮ ಶಿಕ್ಷಣಕ್ಕೆ ಒತ್ತು ಕೊಟ್ಟು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತೆರೆಯುವಂತೆ ಒತ್ತಾಯ ಮಾಡಲಾಗುವುದು. ಸೂರ್ಯ ಕಿರಣ ಹೆಸರಿನಲ್ಲಿ ಪ್ರತಿಯೊಂದು ಗ್ರಾಮಕ್ಕೂ ಸೋಲಾರ್ ಅಳವಡಿಕೆ ಬಗ್ಗೆ ಜನರಿಗೆ ತಿಳುವಳಿಕೆ ಹೇಳಲಾಗುವುದು ಮತ್ತು ಗ್ರಾಮಕ್ಕೊಂದು ಗ್ರಂಥಾಲಯದ ಅಗತ್ಯತೆ ಬಗ್ಗೆ ತಿಳಿಸಲಾಗುವುದು ಎಂದರಲ್ಲದೇ ಕಾರ್ಯಕ್ರಮದ ಬಿಡುವಿನ ವೇಳೆ ಸರ್ಕಾರಿ ಕಚೇರಿಗಳಿಗೆ ತೆರಳಿ ಅಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಸಕರಿಂದ ಗುತ್ತಿಗೆದಾರರ ಕತ್ತು ಹಿಸಕುವ ಕೆಲಸ : ಹೇಮಾವತಿ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಇಂಜಿನಿಯಂರಿಂಗ್ ವಿಭಾಗದ ಕಚೇರಿಗಳಲ್ಲಿ ಸಣ್ಣ ಪುಟ್ಟ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ. ಇದರಿಂದ ಎರಡು, ಮೂರು ಮತ್ತು ನಾಲ್ಕನೇ ದರ್ಜೆ ಗುತ್ತಿಗೆದಾರರು ಹೊಟ್ಟೆಗೆ ಮಣ್ಣು ತಿನ್ನಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು ಅವರು ಅಧಿಕಾರಿಗಳ ಮೇಲೆ ಒತ್ತಡ ತಂದು ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್‍ಗಳನ್ನಾಗಿ ಪರಿವರ್ತಿಸಿ ತಮ್ಮದೇ ಸಂಸ್ಥೆಯಾದ ಎಸ್‍ಟಿಜಿಗೆ ಅನುಕೂಲ ಮಾಡಿಕೊಡುವ ಮೂಲಕ ಸಣ್ಣ ಗುತ್ತಿಗೆದಾರರ ಕುತ್ತಿಗೆ ಹಿಸುಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಡಿ.5 ರಂದು ಇಂಜಿನಿಯಂರಿಂಗ್ ಕಚೇರಿ ಮುತ್ತಿಗೆ : ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸರ್ಕಾರದಿಂದ ಒಪ್ಪಿಗೆ ಪಡೆಯಲು ಕಾಮಗಾರಿಯನ್ನು ಯಾವ ರೀತಿ ಪಟ್ಟಿ ಮಾಡುತ್ತಿದ್ದಾರೆ. ಯಾರ ಪ್ರಭಾವದಿಂದ ಎಲ್ಲಾ ಕಾಮಗಾರಿಗಳು ಪ್ಯಾಕೇಜ್ ಆಗಿ ಮಾರ್ಪಡಾಗುತ್ತಿವೆ ಎಂಬುದರ ಬಗ್ಗೆ ಪ್ರಶ್ನೆ ಮಾಡಲು ಡಿ.5 ರಂದು ಕ್ಷೇತ್ರದ ಇಂಜಿನಿಯಂರಿಂಗ್ ವಿಭಾಗದ ಎಲ್ಲ ಕಚೇರಿಗಳಿಗೂ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಕೆಆರ್‍ಐಡಿಎಲ್ ಅಧಿಕಾರಿಗಳು ನಿಗಮದ ವತಿಯಿಂದ ನಿರ್ವಹಿಸುವ ಕಾಮಗಾರಿಗಳನ್ನು ಕಳಪೆ ಮಾಡಿ ಸಿಮೆಂಟ್ ಮತ್ತು ಕಬ್ಬಿಣಗಳನ್ನು ತೆರಿಗೆ ರಹಿತವಾಗಿ ಖಾಸಗಿಯವರಿಗೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಜತೆಗೆ ಅಂಬೇಡ್ಕರ್ ಭವನಗಳ ನಿರ್ಮಾಣ ಕಾಮಗಾರಿ ವಿಳಂಬದ ಬಗ್ಗೆ ಮಾಹಿತಿ ನೀಡುವಂತೆ ಪ್ರಶ್ನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ದೇವೇಗೌಡನಕೊಪ್ಪಲು ದೇವೇಗೌಡ, ಹೊಸಕೋಟೆ ವಿಜಯಕುಮಾರ್, ಕುರುಬರ ಸಂಘದ ತಾಲೂಕು ಅಧ್ಯಕ್ಷ ಹುಚ್ಚೇಗೌಡ ಇದ್ದರು.
0 ಕಾಮೆಂಟ್‌ಗಳು