ಅಪಘಾತದಲ್ಲಿ ಕೇಂದ್ರ ಗುಪ್ತಾಚಾರ ಇಲಾಖೆ ನಿವೃತ್ತ ಅಧಿಕಾರಿ ಸಾವು : ಹಿಟ್ ಅಂಡ್ ರನ್ ರೀತಿಯಲ್ಲಿ ಕೊಲೆ ಮಾಡಿರುವ ಬಗ್ಗೆ ಅನುಮಾನ

ಮೈಸೂರು : ನಗರದಲ್ಲಿ ಕೇಂದ್ರ ಗುಪ್ತಾಚಾರ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಇದೊಂದು ಹಿಟ್ ಅಂಡ್ ರನ್ ರೀತಿಯಲ್ಲಿ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. 
83 ವರ್ಷದ ಆರ್.ಎಸ್.ಕುಲಕರ್ಣಿ ಎಂಬುವರೆ ಸಾವಿಗೀಡಾದ ನಿವೃತ್ತ ಅಧಿಕಾರಿ. ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಆಕ್ಸಿಡೆಂಟ್ ಮಾಡಲಾಗಿದೆ. ತೀವ್ರ ಗಾಯಗೊಂಡ ಕುಲಕರ್ಣಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. 

ಮೇಲ್ನೋಟಕ್ಕೆ ಇದು ಅಪಘಾತ ಹಿಟ್ ಅಂಡ್ ರನ್ ಪ್ರಕರಣವೆಂದು ಭಾವಿಸಿದ್ದ ಪೊಲೀಸರಿಗೆ ಸಿಸಿ ಟಿವಿ ಫುಟೇಜ್ ನೋಡಿ ದಿಗ್ಬ್ರಮೆಯಾಗಿ  ಭಯಾನಕ ಸತ್ಯ ಬಯಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕುಲಕರ್ಣಿಯವರು ರಸ್ತೆ ಬದಿಗೆ ನಿಂತಿದ್ದರೂ  ಅಪಘಾತವೆಸಗಿ ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳದಲ್ಲಿ ಕೃತ್ಯವೆಸಗಿದ ಕಾರಿನ ಮಿರರ್ ಪತ್ತೆಯಾಗಿದೆ.
ಪ್ರಕಣರದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದೇವೆ. ಎಸಿಪಿ ನೇತೃತ್ವದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಶೀಘ್ರವೇ ಪ್ರಕರಣ ಬೇಧಿಸಲಿದ್ದೇವೆ. ಕುಲಕರ್ಣಿಯವರು ನಿವೃತ್ತರಾಗಿ 23 ವರ್ಷಗಳಾಗಿವೆ. ಕೊಲೆಗೆ ವೃತ್ತಿ ವೈಷಮ್ಯ ಅಥವಾ ವೈಯಕ್ತಿಕ ವೈಷಮ್ಯ ಕಾರಣವೇ ಎಂದು ಈಗಲೇ ಏನೂ ಹೇಳಲಾಗದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಈ ಸಂಬಂಧ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು