ಅಪಾರ್ಟ್‍ಮೆಂಟ್ ಕೊಡುವುದಾಗಿ ಜನರಿಂದ ಅಡ್ವಾನ್ಸ್ ಪಡೆದು ವಂಚಿಸಿ ತಲೆ ಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ಶ್ರೀಹರಿ ಪಾಠಕ್ ಕೊನೆಗೂ ಅಂದರ್
ನವೆಂಬರ್ 05, 2022
ಸಿಸಿಬಿ, ಎನ್‍ಆರ್ ಉಪ ವಿಭಾಗ ವಿಶೇಷ ಪೊಲೀಸ್ ತಂಡದ ಯಶಸ್ವಿ ಕಾರ್ಯಾಚರಣೆ
ಮೈಸೂರು : ನಗರದಲ್ಲಿ ಅಪಾರ್ಟ್‍ಮೆಂಟ್ ಕೊಡುವುದಾಗಿ ನೂರಾರು ಜನರಿಂದ ಮುಂಗಡ ಹಣವನ್ನು ಪಡೆದು ಮೋಸ ಹಾಗೂ ವಂಚನೆ ಮಾಡಿ 2 ವರ್ಷದಿಂದ ತಲೆ ಮರೆಸಿಕೊಂಡಿದ್ದ ಪಾಠಕ್ ಡೆವಲಪರ್ಸ್ ಮಾಲೀಕ ಶ್ರೀಹರಿಪಾಠಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ದ ಮೈಸೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ಗ್ರಾಹಕರ ನ್ಯಾಯಾಲಯದಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಹರಿಪಾಠಕ್ ನ್ಯಾಯಾಲಯದಿಂದ ಜಾಮೀನು ಪಡೆದು ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಾರಣ, ನ್ಯಾಯಾಲಯ ಈತನನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರ್ ಪಡಿಸುವಂತೆ ಸುಮಾರು 17 ಕ್ಕೂ ಹೆಚ್ಚು ಅರೆಸ್ಟ್ ವಾರೆಂಟ್‍ಗಳನ್ನು ಹೊರಡಿಸಲಾಗಿತ್ತು.
ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸದರಿ ವ್ಯಕ್ತಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರ್ ಪಡಿಸುವಂತೆ ಹೊರಡಿಸಿದ ವಾರಂಟ್ ಸಂಬಂಧ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಮತ್ತು ನರಸಿಂಹರಾಜ ಉಪ ವಿಭಾಗದ ವಿಶೇಷ ತಂಡದ ಪೊಲೀಸರು ನವೆಂಬರ್ 3 ರಂದು ಶ್ರೀಹರಿ ಪಾಠಕ್ ನನ್ನು ಮುಂಬೈನ ಅಂಧೇರಿಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಲಯವು ಪಾಠಕ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಸಿಬಿ ಮತ್ತು ನರಸಿಂಹರಾಜ ಉಪ ವಿಭಾಗದ ವಿಶೇಷ ತಂಡದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ:ಚಂದ್ರಗುಪ್ತ ಪ್ರಶಂಸಿಸಿದ್ದಾರೆ.
0 ಕಾಮೆಂಟ್‌ಗಳು