ಕಕ್ಕೆಹೊಲ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ : ಸಕಾಲಕ್ಕೆ ವೈದ್ಯಕೀಯ ಸೇವೆ ಲಭ್ಯವಾಗದೆ ಒದ್ದಾಡಿ ಪ್ರಾಣಬಿಟ್ಟ ಎತ್ತುಗಳು

 -ಶಾರುಕ್ ಖಾನ್, ಹನೂರು

ಹನೂರು : ತಾಲ್ಲೂಕಿನ ಪೊನ್ನಾಚಿ ಬಳಿಯ ಕಾಡಂಚಿನ ಗ್ರಾಮವಾದ ಕಕ್ಕೆಹೊಲದಲ್ಲಿ ನೂರಾರು ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಎತ್ತುಗಳು ಒದ್ದಾಡಿ ಪ್ರಾಣ ಬಿಟ್ಟಿರುವ ಘಟನೆ ವರದಿಯಾಗಿದೆ.
ಗ್ರಾಮದ ದೊರೆಸ್ವಾಮಿ ಎಂಬುವರ ಮನೆಯಲ್ಲಿನ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಇಂದು ಬೆಳಿಗ್ಗೆ ಎತ್ತು ಸಾವನ್ನಪ್ಪಿದೆ. ಮತ್ತೆರಡು ಎತ್ತುಗಳು ರಾತ್ರಿಯಿಂದಲೇ ತೀವ್ರ ನಿತ್ರಾಣವಾಗಿವೆ. ಈ ಬಗ್ಗೆ ಪಶು ವೈದ್ಯರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ. 
ಸಾಮಾಜಿಕ ಕಾರ್ಯಕರ್ತ ಪೊನ್ನಾಚಿಯ ಸ್ನೇಹಜೀವಿ ರಾಜು ಮಾತನಾಡಿ, ಕಾಡಂಚಿನ ಗ್ರಾಮದ ರೈತರು ಭೂಮಿ ಉಳುಮೆಗೆ ಎತ್ತುಗಳನ್ನೆ ನಂಬಿದ್ದಾರೆ. ದುಡಿಯುವ ಎತ್ತುಗಳು ಹೀಗೆ ಏಕಾಏಕಿ ಚರ್ಮಗಂಟು ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ರೈತರ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಹಲವು ದಿನಗಳ ಹಿಂದೆಯೇ ಗ್ರಾಮದಲ್ಲಿನ ಜಾನುವಾರುಗಳಿಗೆ ಈ ರೋಗ ಕಾಣಸಿಕೊಂಡಿತ್ತು. ಹಲವಾರು ಜಾನುವಾರುಗಳೂ ಸಹ ಸತ್ತಿವೆ ರೈತರಿಗೆ ಇದು ಚರ್ಮಗಂಟು ಕಾಯಿಲೆಯಿಂದ ಸತ್ತಿದೆ ಎಂದು ಗೊತ್ತಿಲ್ಲ. ಇದೀಗ ಗೊತ್ತಾಗಿದೆ. ಈ ಬಗ್ಗೆ ಪಶು ವೈದ್ಯರ ಗಮನ ಸೆಳೆದಾಗ ಒಮ್ಮೆ ಮಾತ್ರ ಬಂದು ಚಿಕಿತ್ಸೆ ನೀಡಿ ಹೋದವರು ಮತ್ತೆ ಇತ್ತಕಡೆ ಬಂದಿಲ್ಲ. ಇದೊಂದು ಅಂಟುರೋಗದ ರೀತಿ ಎಲ್ಲ ಜಾನುವಾರುಗಳಿಗೂ ಹರಡುತ್ತಿದೆ. ಗ್ರಾಮದಲ್ಲಿ ಸಾವಿರಾರು ಜಾನುವಾರುಗಳಿವೆ ಇವುಗಳನ್ನೆ ನಂಬಿ ಇಲ್ಲಿನ ರೈತರು ಜೀವನ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕು ಜತೆಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು