41 ಲಕ್ಷ ರೂ. ಎಂಪಿ ಲ್ಯಾಡ್ ಹಣ ದುರುಪಯೋಗ ಆರೋಪ : ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ದೂರು
ನವೆಂಬರ್ 08, 2022
ಮೈಸೂರು : ಸಂಸದ ಪ್ರತಾಪ್ ಸಿಂಹ ನಿಯಮ ಉಲ್ಲಂಘಿಸಿ 41 ಲಕ್ಷ ರೂ. ಎಂಪಿ ಲ್ಯಾಡ್ ಹಣವನ್ನು ದುರುಪಯೋಗ ಮಾಡಿದ್ದಾರೆಂದು ಆರೋಪಿಸಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಡಿಸಿ ಅವರಿಗೆ ದೂರು ಸಲ್ಲಿಸಿದರು. ಪ್ರತಾಪ್ ಸಿಂಹ ಮೈಸೂರು ಕೊಡಗು ಜಿಲ್ಲೆಯ ಸಂಸದರು. ತಮ್ಮ ಎಂಪಿ ಲ್ಯಾಡ್ ಅನುದಾನವನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಖರ್ಚು ಮಾಡಬೇಕು. ಅದನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಕಿಕ್ಕಿಂಜೆ ಪಟ್ಟಣದ ಬೆಂದ್ರಲಾ ವೆಂಕಟಕೃಷ್ಣ ಈರ್ವತ್ರಾಯ ಮೆಮೋರಿಯಲ್ ಟ್ರಸ್ಟ್ ಗೆ ಆಂಬುಲೆನ್ಸ್ ಖರೀದಿಸಲು 18 ಲಕ್ಷ ರೂ. ಮತ್ತು ಮೈಸೂರಿನ ಎಂ.ಗೋವಿಂದ ಶೆಣೈ ಚಾರಿಟಬಲ್ ಟ್ರಸ್ಟ್ ಅವರಿಗೆ 23 ಲಕ್ಷ ರೂ. ಎಂಪಿ ಲ್ಯಾಡ್ ಹಣವನ್ನು ನೀಡಿದ್ದಾರೆ. ಬೆಂದ್ರಲಾ ವೆಂಕಟಕೃಷ್ಣ ಈರ್ವತ್ರಾಯ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ಮುರಳಿಕೃಷ್ಣ ಈರ್ವತ್ರಾಯ ಅವರು ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ ಮೂಡಿಗೆರೆಯಲ್ಲಿ ನಡೆಸುತ್ತಿರುವ ಹೋಯ್ಸಳ ಕ್ಲೀನಿಕ್ ಸಂಸ್ಥೆಯ ಅಧ್ಯಕ್ಷರೂ ಸಹ ಆಗಿದ್ದಾರೆ. ಅರ್ಪಿತಾ ಸಿಂಹ ಈ ಸಂಸ್ಥೆಯ ನಿರ್ದೇಶಕರೂ ಆಗಿದ್ದು, ಇವರೆಲ್ಲರೂ ಸೇರಿ ಸಂಸದರ ನಿಧಿಯನ್ನು ಕಾನೂನು ಬಾಹಿರವಾಗಿ ದುರುಪಯೋಗ ಮಾಡಿಕೊಂಡಿರುವುದಾಗಿ ಲಕ್ಷ್ಮಣ್ ದೂರಿನಲ್ಲಿ ಹೇಳಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ತಮ್ಮ ವ್ಯಾಪ್ತಿಯೊಳಗೆ ಖರ್ಚು ಮಾಡಬೇಕು. ವಿಶೇಷ ಸಂದರ್ಭದಲ್ಲಿ ವ್ಯಾಪ್ತಿ ಮೀರಿ ಖರ್ಚು ಮಾಡಲು ಅವಕಾಶವಿದ್ದರೂ ಎರಡೂ ಸಂಸದರ ಒಪ್ಪಿಗೆ ಬೇಕು. ಆದರೆ, ಯಾವುದೇ ಕಾರಣಕ್ಕೂ ಟ್ರಸ್ಟ್, ಸೊಸೈಟಿ, ಕೋ ಆಪರೇಟೀವ್ ಸೊಸೈಟಿಗೆ ಎಂಪಿ ಲ್ಯಾಡ್ ಅನುದಾನ ನೀಡುವಂತಿಲ್ಲ. ಸಂಸದರು ನಿಯಮ ಮೀತಿ ತಮಗೆ ಬೇಕಾದವರಿಗೆ ಜನರ ತೆರಿಗೆ ಹಣವನ್ನು ನೀಡಿ ನಿಧಿ ದುರುಪಯೋಗ ಮಾಡಿಕೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಲಕ್ಷ್ಮಣ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಮೂರ್ತಿ, ಬಿ.ಎಂ.ರಾಮು, ಮಹೇಶ್, ರಾಜೇಶ್, ಮಾರುತಿ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು