ಮೈಸೂರಿನಲ್ಲಿ ಬ್ಯೂಟೀಷಿಯನ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಕನ್ನಡ ರಾಜ್ಯೋತ್ಸವ

ಒಟ್ಟಾಗಿ ನಾಡಗೀತೆ ಹಾಡುವ ಮೂಲಕ ಕನ್ನಡ ಪ್ರೇಮವನ್ನು ಪ್ರಕಟಿಸಿದ ಮಾನಿನಿಯರು 

ವರದಿ-ನಜೀರ್ ಅಹಮದ್, ಮೈಸೂರು

ಮೈಸೂರು : ನಾವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆಯೋ ಅಲ್ಲಿ ನಮ್ಮ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಮತ್ತು ನಮ್ಮಲ್ಲಿ ಸಾರ್ಥಕ ಮನೋಭಾವ ಮೂಡುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಮೈಸೂರು ಬ್ಯೂಟೀಷಿಯನ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ಯೂಟಿಷೀಯನ್ ಗಳು ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನೀವು ಗ್ರಾಹಕರಲ್ಲಿ ಹಣ ಪಡೆದು ಕಟಿಂಗ್ ಮಾಡಿದಾಗ ನಿಮ್ಮ ಕೆಲಸದಲ್ಲಿ ಹಲವಾರು ಲೋಪಗಳನ್ನು ಗ್ರಾಹಕರು ತೋರಿಸಲು ಸಾಧ್ಯ. ಆದರೆ, ಇದೇ ಕೆಲಸವನ್ನು ನೀವು ಯಾವುದಾದರೂ ಅನಾಥಾಶ್ರಮಗಳಲ್ಲಿ ನಿರ್ಗತಿಕ ಬಡ ಮಕ್ಕಳಿಗೆ ಮಾಡಿದಾಗ ಅವರು ಅತ್ಯಂತ ಸಂತೋಷದಿಂದ ನಿಮ್ಮ ಕೆಲಸವನ್ನು ಗೌರವಿಸುತ್ತಾರೆ. ಯಾವುದೇ ಲೋಪ ಹುಡುಕಲು ಸಾಧ್ಯವಿಲ್ಲ ಇದರಿಂದ ನಿಮ್ಮ ಆತ್ಮಕ್ಕೂ ತೃಪ್ತಿ ಸಿಗುತ್ತದೆ ಎಂದರು.

ಬ್ಯೂಟೀಷಿಯನ್ ಎಂದಾಕ್ಷಣ ಮೊದಲು ನಾವು ಆಕರ್ಷಕರಾಗಿರಬೇಕು. ನಮ್ಮನ್ನು ನೋಡಿ ಗ್ರಾಹಕರು ಆಕರ್ಷಿತರಾಗುತ್ತಾರೆ. ವೃತ್ತಿಯಲ್ಲಿ ತಾಂತ್ರಿಕ ನೈಪುಣ್ಯತೆ ಸಾಧಿಸಿ ಕಾಲಕಾಲಕ್ಕೆ ಅಗತ್ಯವಾದ ತರಬೇತಿಗಳನ್ನು ಪಡೆದು ವೃತ್ತಿ ನೈಪುಣ್ಯ ಸಾಧಿಸಬೇಕೆಂದು ಅವರು ಮಹಿಳೆಯರಿಗೆ ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಇಷ್ಟೊಂದು ಮಹಿಳೆಯರು ಸಂಘಟಿತರಾಗಿ ಕನ್ನಡ ಹಬ್ಬವನ್ನು ಮಾಡುತ್ತಿರುವುದು ಸಂತೋಷದ ವಿಷಯ. ಇದರ ಜತೆಗೆ ನೀವು ಕನ್ನಡ ಭಾಷೆ, ನೆಲ, ಜಲ, ಸಂಸ್ಕøತಿ ಉಳಿಸುವ ರಾಯಭಾರಿಗಳಾಗಬೇಕು. ಜತೆಗೆ ಜಯಸಂಖ್ಯೆ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಹೇಳುವ ಶಿಕ್ಷಕಿಯರೂ ಆಗಬೇಕು. ಕನ್ನಡ ಭಾಷೆ ಸಮೃದ್ಧವಾಗಿದೆ. ಅದನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಹಿಳೆಯರು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ತಮ್ಮ ಕನ್ನಡ ನಾಡು, ನುಡಿ, ಸಂಸ್ಕøತಿಯ ಪ್ರೀತಿಯನ್ನು ಪ್ರಚುರಪಡಿಸಿದರು. ಜತೆಗೆ ಪುನಿತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ನೆನಪಿಗಾಗಿ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹಾಡನ್ನು ಎಲ್ಲರೂ ಒಟ್ಟಾಗಿ ಹಾಡುವ ಮೂಲಕ ಅಪ್ಪುವಿನ ಸ್ಮರಣೆ ಮಾಡಿದರು.
ಮೈಸೂರು ಬ್ಯೂಟೀಷಿಯನ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷೆ ವೇದಾ ರೈ, ಕಾರ್ಯದರ್ಶಿ ಸಬಿನಾ, ಎಚ್.ಆರ್.ಸಪ್ನಾ, ಪ್ರತಿಭಾ ಶೆಟ್ಟಿ, ನಸ್ರೀನ್, ರಾಜೇಶ್ವರಿ, ವೇದಾವತಿ, ಮಾಲಿನಿ ಮುಂತಾದವರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು