ಲೈಂಗಿಕ ಪ್ರಕರಣದಿಂದ ಹಿಂದೆ ಸರಿಯುವಂತೆ ಒಡನಾಡಿ ಸಂಸ್ಥೆಗೆ ಸಚಿವರಿಂದ 3 ಕೋಟಿ ಆಮೀಷ : ಪರಶು ಆರೋಪ

ಮೈಸೂರು : ಚಿತ್ರದುರ್ಗದ ಮುರುಘಾಮಠದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅತ್ಯಾಚಾರ ಆರೋಪಿ ಶಿವಮೂರ್ತಿ ಶರಣರ ಮೇಲಿನ ಪ್ರಕರಣದಿಂದ ಹಿಂದೆ ಸರಿಯುವಂತೆ ಸಚಿವರೊಬ್ಬರು ತಮಗೆ ಕೇಳಿಕೊಂಡಿದ್ದು, ಅದಕ್ಕಾಗಿ ಅವರು ಮೂರು ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕ ಎಂ.ಎಲ್ ಪರಶುರಾಮ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ವಿದ್ಯಾರ್ಥಿ ಪದಾಧಿಕಾರಿಗಳ ಅಭಿವಿನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಸಂತ್ರಸ್ತ ಹೆಣ್ಣು ಮಕ್ಕಳ ಪರವಾಗಿ ನಿಲ್ಲಬೇಕಾದವರು ಆರೋಪಿ ಸ್ವಾಮೀಜಿ ಪರ ನಿಂತಿದ್ದಾರೆ. ಸಚಿವರೊಬ್ಬರು ‘ಸ್ವಾಮೀಜಿ ವಿಚಾರದಲ್ಲಿ ಸುಮ್ಮನಿದ್ದು ಬಿಡ್ರಪ್ಪ’ ಎನ್ನುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಸುಮಾರು 23 ಹೆಣ್ಣು ಮಕ್ಕಳ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 25 ವರ್ಷಗಳಿಂದ ಈ ಕೃತ್ಯ ನಡೆಯುತ್ತಿದ್ದು, ಈಗ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯೊಬ್ಬಳು ಸ್ವಾಮೀಜಿ ಕಚ್ಚಿದ ಎದೆ ಭಾಗವನ್ನು ತೋರಿದಾಗ ತಂದೆ ಸ್ಥಾನದಲ್ಲಿ ನಿಂತು ಮೌನ ವಹಿಸುವುದಾದರೂ ಹೇಗೆ? ಜೀವವಿರುವವರೆಗೂ ಆ ಹೆಣ್ಣು ಮಕ್ಕಳ ರಕ್ಷಣೆ ಮಾಡುತ್ತೇವೆ” ಎಂದು ಪರಶುರಾಮ್ ಪ್ರತಿಜ್ಞೆ ಮಾಡಿದ್ದಾರೆ.
“ಲಜ್ಜೆಗೆಟ್ಟ ರಾಜಕೀಯ ನಾಯಕರ ಆಮಿಷಗಳಿಗೆ ಯಾವತ್ತು ಬಲಿಯಾಗುವುದಿಲ್ಲ. ನಾವು ಸತ್ಯದ ಪರ ನಿಂತಿದ್ದೇವೆ. ಸಂತ್ರಸ್ತ ಬಾಲಕಿಯರ ನೋವು ಕೇಳಿ ಆಘಾತವಾಯಿತು. ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು