ಸಂವಿಧಾನ ಸಮರ್ಪಣಾ ದಿನವನ್ನು ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ದಿನವನ್ನಾಗಿ ಬದಲಾಯಿಸಿರುವ ಕೇಂದ್ರ ಸರ್ಕಾರದ ಆದೇಶ ಹರಿದು ದಸಂಸ ಬೃಹತ್ ಪ್ರತಿಭಟನೆ
ನವೆಂಬರ್ 26, 2022
ಮೈಸೂರು : ನವೆಂಬರ್ 26 ರ ಸಂವಿಧಾನ ಸಮರ್ಪಣಾ ದಿನವನ್ನು ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುರ್ವರ್ಣ ಮತ್ತು ತಾರತಮ್ಯ ಜಾತಿ ಪದ್ಧತಿಯ ವೈಭವೀಕರಣ ದಿನವನ್ನಾಗಿ ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಮತ್ತು ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಜಾತಂತ್ರದ ಜನನಿ ಆದೇಶ ಪ್ರತಿಯನ್ನು ಹರಿದು ಹಾಕಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಪುರಭವನದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ಶನಿವಾರ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ ಸಮರ್ಪಣ ದಿನವನ್ನು ಆಚರಿಸುತ್ತಿದೆ. ಆದರೆ ಭಾರತದ ಪ್ರಜಾ ಪ್ರಭುತ್ವವನ್ನೇ ಅಣಕಿಸುವ ರೀತಿಯಲ್ಲಿ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಮತ್ತು ಸಾಮಾಜಿಕ ನ್ಯಾಯಗಳಿಗೆ ವಿರುದ್ಧವಾದ ಧೋರಣೆ ಹೊಂದಿರುವ ವೇದಗಳಲ್ಲಿಯೇ ಪ್ರಜಾ ಪ್ರಭುತ್ವವಿತ್ತು ಎಂಬ ಹಸಿ ಸುಳ್ಳನ್ನು ಹೇಳಲು ಹೊರಟಿದೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ನವೆಂಬರ್ 26 ನ್ನು ಭಾರತದ ಪ್ರಜಾತಂತ್ರದ ಜನನಿ ಎಂಬ ಹೆಸರಿನಲ್ಲಿ ದೇಶಾದ್ಯಂತ ಎಲ್ಲಾ ರಾಜ್ಯ ಸರ್ಕಾರಗಳು ವಿಶ್ವವಿದ್ಯಾನಿಲಯಗಳು ಹಾಗೂ ಕೇಂದ್ರ ಕಚೇರಿಗಳು ಆಚರಿಸಬೇಕು ಎಂದು ಸೂಚನೆ ಹೊರಡಿಸಿದೆ. ಹೀಗೆ ನೀಡಿರುವ ಸೂಚನೆಯಲ್ಲಿ ಒಮ್ಮೆಯೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯದೆ ಅವಮಾನಿಸಿದೆ. ಇದಲ್ಲದೆ, ವೇದಗಳ ಕಾಲದಲ್ಲಿಯೇ ಪ್ರಜಾಪ್ರಭುತ್ವವಿತ್ತು. ಅದು ಗ್ರಾಮಗಳಲ್ಲಿದ್ದ ಪಂಚಾಯಿತಿ ಹಾಗೂ ಖಾಪ ರೂಪದಲ್ಲಿ ಮುಂದುವರೆಯಿತು. ಭಗವದ್ಗೀತೆಯು ಪ್ರಜಾತಂತ್ರದ ಭಾಗವಾಗಿತ್ತು. ಗ್ರೀಕ್ ಮತ್ತು ರೋಮನ್ ಪ್ರಜಾಪ್ರಭುತ್ವದಂತೆ ಭಾರತದಲ್ಲಿ ಹುಟ್ಟಿನ ಆಧಾರದಲ್ಲಿ ಜ್ಞಾನ, ಸಂಪತ್ತು ಮತ್ತು ರಾಜ್ಯಾಧಿಕಾರಗಳನ್ನು ಒಂದೆಡೆ ಹಿಡಿದಿಟ್ಟುಕೊಂಡು ನಿರಂಕುಶ ಸಾಮ್ರಾಜ್ಯ ರೂಪುಗೊಂಡಿರಲಿಲ್ಲ. ಹೀಗೆ ಒಂದರ ಹಿಂದೆ ಒಂದರಂತೆ ಸುಳ್ಳಿನ ಸರಮಾಲೆಯನ್ನೇ ಪೋಣಿಸಿದೆ. ಈ ಮೂಲಕ ಚಾತುರ್ವರ್ಣ ಪದ್ಧತಿ, ಜಾತಿ ಪದ್ಧತಿಯನ್ನು ಶ್ರೇಷ್ಠವೆಂದು ಪರಿಗಣಿಸುವ ಆರ್.ಎಸ್.ಎಸ್. ವಾದವನ್ನು ಸಂವಿಧಾನ ಸಮರ್ಪಣ ದಿನದಂದೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ಆಚರಿಸಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಪ್ರಜಾಪ್ರಭುತ್ವದ ಕಲ್ಪನೆಯ ಮೂಲವನ್ನು ಬೌದ್ಧ ಧರ್ಮದಲ್ಲಿ ಕಂಡಿದ್ದರು. ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ ಸಮಾನತೆ ಮತ್ತು ಬಂಧುತ್ವ ಪರಿಕಲ್ಪನೆಗಳನ್ನು ನಾನು ಬೌದ್ಧ ದಮ್ಮದಿಂದ ಪಡೆದುಕೊಂಡಿದ್ದೇನೆ ಎಂದಿದ್ದರು. ಬೌದ್ಧ ಬಿಕ್ಕು ಸಂಘಗಳಲ್ಲಿ ಪ್ರಜಾಪ್ರಭುತ್ವದ ಬೇರುಗಳಿವೆ ಎಂದು ಗುರುತಿಸಿದ್ದರು. ವಿಪರ್ಯಾಸವೆಂದರೆ ನರೇಂದ್ರ ಮೋದಿಯ ಸೆಕ್ರೆಟೇರಿಯಟ್ ಹೊರಡಿಸಿರುವ ಟಿಪ್ಪಣಿಯಲ್ಲಿ ಬುದ್ಧಗುರುವಿನ ಬಗ್ಗೆ ಪ್ರಸ್ತಾಪವೇ ಇಲ್ಲ. ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರನ್ನು ಉಲ್ಲೇಖಿಸಿಲ್ಲ. ಬದಲಾಗಿ ಆರ್.ಎಸ್.ಎಸ್. ಸಂಸ್ಥಾಪಕ ಹೆಡ್ಗೆವಾರ್ ಸಂವಿಧಾನವನ್ನು ಪ್ರಶ್ನಿಸುತ್ತಾ ಅದರಲ್ಲಿ ಬ್ರಾಹ್ಮಣ ಶಾಹಿ ಅಂಶಗಳಿಲ್ಲವೆಂದು ಯಾವುದನ್ನು ಪ್ರತಿಪಾದಿಸಿದ್ದರೋ ಆ ಬ್ರಾಹ್ಮಣ ಶಾಹಿ ಅಂಶಗಳನ್ನೇ ಇಂದು ಸಂವಿಧಾನದೊಳಗೆ ಸೇರಿಸುವ ಕೆಲಸವನ್ನು ಈ ಟಿಪ್ಪಣಿ ಮಾಡಿದೆ. ನರೇಂದ್ರ ಮೊದಿ ಸರ್ಕಾರದ ಈ ಕೃತ್ಯವನ್ನು ದಲಿತ ಸಂಘರ್ಷ ಸಮತಿಗಳ ಐಕ್ಯ ಹೋರಾಟ ಚಾಲಾನ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಚುಂಚನಹಳ್ಳಿ ಮಲ್ಲೇಶ್, ಭುಗತಗಳ್ಳಿ ಕೆ.ಮಣಿಯಯ್ಯ, ಮಲ್ಲಹಳ್ಳಿ ನಾರಾಯಣ, ಕಾರ್ಯ ಬಸವಣ್ಣ, ಎಡದೊರೆ ಮಹದೇವಯ್ಯ, ಬನ್ನಹಳ್ಳಿ ಸೋಮಣ್ಣ, ಕಲ್ಲಹಳ್ಳಿ ಕುಮಾರ್, ಮಂಜು ಶಂಕರಪುರ, ಪಂಡಿತಾರಾಧ್ಯ, ವರದಯ್ಯ, ಪ್ರಸನ್ನ ತಳೂರು, ಮಂಜುನಾಥ್ ಮುರುಡಗಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು