ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣ : ತನ್ವೀರ್ ಸೇಠ್ ಘೋಷಣೆ

ರಾಜೀವ್ ನಗರ ಅಲ್ ಬದರ್ ಮೈದಾನದಲ್ಲಿ ಯಶಸ್ವಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವ 

-ನಜೀರ್ ಅಹಮದ್, ಪಾಂಡವಪುರ

ಮೈಸೂರು : ಸಧ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ನಗರದ ರಾಜೀವ್ ನಗರ ಅಲ್ ಬದರ್ ಮೈದಾನದಲ್ಲಿ  ಕಾಂಗ್ರೆಸ್, ಜೆಡಿಎಸ್, ಎಸ್‍ಡಿಪಿಐ, ಆಮ್ ಆದ್ಮಿ ಪಕ್ಷಗಳು ಮತ್ತು ರೈತಸಂಘ ಮತ್ತಿತರ ಸಂಘಟನೆಗಳು ಒಟ್ಟಾಗಿ ನಡೆಸಿದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಇಸ್ಲಾಂ ಧರ್ಮದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಇದ್ದಿದ್ದರೇ ಮನೆಗೊಂದರಂತೆ ಟಿಪ್ಪು ಪ್ರತಿಮೆ ನಿರ್ಮಾಣವಾಗುತ್ತಿತ್ತು. ನಮ್ಮನ್ನು ಒಗ್ಗಟ್ಟಾಗಿಸುವ ಶಕ್ತಿ ಟಿಪ್ಪು ಹೆಸರಿಗಿದೆ. ಇಂದು ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿರುವುದೇ ಇದಕ್ಕೆ ಸಾಕ್ಷಿ. ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ ಎಂದರು. 
ಟಿಪ್ಪು ಸುಲ್ತಾನರು ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಮುಂದಿಟ್ಟು ಸರ್ವಶಕ್ತವಾದ ಅಲ್ಲಾಹ್ ನನ್ನು ಸಾಕ್ಷೀಕರಿಸಿ ಜನಪರ ಆಡಳಿತ ನಡೆಸಿದರು. ಮೈಸೂರು ರಾಜ್ಯವನ್ನಾಳಿದರೂ 260 ವರ್ಷಗಳ ಹಿಂದೆಯೇ ಶ್ರೀರಂಗಪಟ್ಟಣದ ಗುಂಬಜ್ ದ್ವಾ ರದ ಮೇಲೆ ರಿಯಾಸತೇ ದಖನ್ ಕರ್ನಾಟಕ್ ಎಂದು ಬರೆಸಿದ್ದಾರೆ. ಅಂದರೆ ಕರ್ನಾಟಕ ಎಂಬ ಹೆಸರಿನ ಕಲ್ಪನೆಯೇ ಇಲ್ಲದ ಅವರ ಆಳ್ವಿಕೆಯಲ್ಲಿ ಈ ರಾಜ್ಯವನ್ನು ಕರ್ನಾಟಕ ಎಂದು ಮೊಟ್ಟ ಮೊದಲ ಬಾರಿಗೆ ಸಂಬೋಧಿಸಿದ ಕೀರ್ತಿ ಟಿಪ್ಪು ಸುಲ್ತಾನರಿಗೆ ಸಲ್ಲುತ್ತದೆ ಎಂದರು.

ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಟಿಪ್ಪು ಎಕ್ಸ್‍ಪ್ರೆಸ್ ರೈಲಿಗೆ ನಾವು ಬೇಕಂತಲೇ ಟಿಪ್ಪು ಹೆಸರನ್ನು ತೆಗೆದಿದ್ದೇವೆ. ಟಿಪ್ಪು ಏನು ಮೈಸೂರಿನವರಾ? ಎಂದು ಹೇಳಿದ್ದ  ಸಂಸದ ಪ್ರತಾಪ್ ಸಿಂಹ ಏನು ಮೈಸೂರಿವರಾ? ಎಂದು ಟಾಂಗ್ ನೀಡಿದರು. ದೂರದ ಸಕಲೇಶಪುರದಿಂದ ಬಂದು ಸ್ವಂತ ಪರಿಶ್ರಮದಿಂದ ರಾಜಕಾರಣ ಮಾಡಿಲ್ಲ. ಇಲ್ಲಿ ಮೋದಿ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಟಿಪ್ಪು ಸುಲ್ತಾನರ ಚರಿತ್ರೆಯನ್ನು ಅವರು ಸರಿಯಾಗಿ ಓದಿಲ್ಲ. ಅಂದಿನ ಟಿಪ್ಪು ಆಳ್ವಿಕೆಯಲ್ಲಿ ಬೇರೆ ಬೇರೆ ದೇಶಗಳ ಜಿಡಿಪಿ ಗಿಂತಾ ಮೈಸೂರು ರಾಜ್ಯದ ಜಿಡಿಪಿ ಐದು ಪಟ್ಟು ಹೆಚ್ಚಿತ್ತು. ತನ್ನ ರಾಜ್ಯದಲ್ಲಿ ಪಾನ ನಿಷೇಧ ಮಾಡಿದ ಜಗತ್ತಿನ ಮೊಟ್ಟ ಮೊದಲ ದೊರೆ ಟಿಪ್ಪು ಸುಲ್ತಾನರು. 35 ಸಾವಿರ ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಅವರ ಒಟ್ಟು ರಾಜ್ಯದಲ್ಲಿ ಶೇ.40 ರಷ್ಟು ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು ಎಂದರು.
ಪ್ರತಾಪ್ ಸಿಂಹ ಮೊದಲು ಆರ್‍ಎಸ್‍ಎಸ್ ನವರಾದ ಭಗವಾನ್ ಎಸ್.ಗಿದ್ವಾನಿ ಬರೆದಿರುವ ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್ ಕೃತಿಯನ್ನು ಓದಲಿ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರಾದ ತನ್ವೀರ್ ಸೇಠ್ ಮತ್ತು ಎಚ್.ವಿಶ್ವನಾಥ್ ಅವರನ್ನು ಭಾರಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ನಂತರ ಕನ್ನಡ ಬಾವುಟ ದ್ವಜಾರೋಹಣ ನಡೆಸಿ ನಾಡಗೀತೆ ಹಾಡಲಾಯಿತು. ಕಾರ್ಯಕ್ರಮ ಮುಗಿದ ನಂತರ ಶಾಸಕ ತನ್ವೀರ್ ಸೇಠ್ ಪಕ್ಷಭೇದ ಮರೆತು ಎಲ್ಲರ ಜತೆಗೂಡಿ ಊಟ ಮಾಡಿದ್ದು ವಿಶೇಷವಾಗಿತ್ತು
ಮಾಜಿ ಮೇಯರ್ ಅಯ್ಯೂಬ್ ಖಾನ್, ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ಆಫ್ತಾಬ್, ಸುಹೇಲ್ ಬೇಗ್, ಮಾಜಿ ಸದಸ್ಯ ಶೌಕತ್ ಪಾಷ, ಎಮ್.ಎಫ್.ಕಲೀಂ, ಪ್ರೊ.ಪಿ.ನಂಜರಾಜ ಅರಸು, ಪ್ರೊ.ಮಹೇಶ್ ಚಂದ್ರ ಗುರು, ಎಂ.ಕಲೀಂ ಅಹಮದ್, ಮೌಲಾನಾ ಅರ್ಷದ್ ಸಾಹೇಬ್, ಅಬ್ದುಲ್ ಖಾದರ್ ಷಾಹೀದ್ ಮುಂತಾದವರು ಇದ್ದರು.

ಅಡ್ಡಂಡ ಕಾರ್ಯಪ್ಪ ಅಲ್ಲ ಅನ್ನಾಡಿ ಕಾರ್ಯಪ್ಪ

`ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವನೊಬ್ಬ ಅನ್ನಾಡಿ ಕಾರ್ಯಪ್ಪ. ಅವನಿಗೇನು ಗೊತ್ತು ಟಿಪ್ಪು ಚರಿತ್ರೆ. ಇನ್ನು ಸಂಸದ ಪ್ರತಾಪ್ ಸಿಂಹ 80 ಸಾವಿರ ಜನರನ್ನು ಟಿಪ್ಪು ಕೊಂದ ಸುಳ್ಳು ಸುಳ್ಳನ್ನೇ ಹೇಳುತ್ತಾರೆ. ಅಂದಿನ ಮೈಸೂರು ಸಂಸ್ಥಾನದ ಜನಸಂಖ್ಯೆ ಎಷ್ಟಿತ್ತು ಎನ್ನುವುದನ್ನು ಮೊದಲು ತಿಳಿಯಲಿ.  ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್, ರೈಲಿನ ಮೇಲೆ ಅವರ ಹೆಸರು ತೆಗೆದಿರಬಹುದು ಆದರೆ, ಸಮಸ್ತ ಕನ್ನಡಿಗರ ಮನಸ್ಸಿನಿಂದ ಅವರ ಹೆಸರು ತೆಗೆಯಲು ಸಾಧ್ಯವಿಲ್ಲ. ಸುಳ್ಳು ಕತೆಗಳನ್ನು, ನಾಟಕಗಳನ್ನು ಸೃಷ್ಟಿಸಿ ಟಿಪ್ಪು ಹೆಸರಿಗೆ ಅಪಚಾರ ಮಾಡಲಾಗುತ್ತಿದೆ. ಎಂದಿಗೂ ಶತೃಗಳ ಮುಂದೆ ಮಂಡಿಯೂರದ ಜಗತ್ತಿನ ಏಕೈಕ ನಾಯಕ. ಅನೇಕ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಶೃಂಗೇರಿ ಮಠವನ್ನು ರಕ್ಷಿಸಿರುವುದಕ್ಕೆ ದಾಖಲೆಗಳು ಸಾಕ್ಷಿಯಾಗಿವೆ.'

-ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರು 




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು