ನಾಳೆ ಮೈಸೂರಿನ ಅಲ್ ಬದರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ, ಜತೆಗೆ ಟಿಪ್ಪು ಉತ್ಸವಕ್ಕೆ ಭರದ ಸಿದ್ಧತೆ

ಮೈಸೂರು : ನಾಳೆ ಮೈಸೂರಿನ ರಾಜೀವ್ ನಗರದಲ್ಲಿರುವ ಅಲ್ ಬದರ್ ಮೈದಾನದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‍ಡಿಪಿಐ ಒಟ್ಟಾಗಿ ಮಾಡುತ್ತಿರುವ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ.
ಸುಮಾರು 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸ್ಥಳೀಯ ಮುಖಂಡರು ಹೇಳಿದರು. ಕಾರ್ಯಕ್ರಮದ ಉಸ್ತುವಾರಿಯ ಪ್ರಮುಖರಲ್ಲಿ ಒಬ್ಬರಾದ ಜೆಡಿಎಸ್ ಮುಖಂಡ ಶಾಹೀದ್ ಮಾತನಾಡಿ, ನಮ್ಮಲ್ಲಿ ಜಯಂತಿ ಆಚರಣೆಯ ಕಲ್ಪನೆಯೇ ಇಲ್ಲ. ಟಿಪ್ಪು ಸುಲ್ತಾನರು ಮಡಿದಾಗಿನಿಂದಲೂ ಶ್ರೀರಂಗಪಟ್ಟಣದ ಗುಂಬಜ್ ನಲ್ಲಿರುವ ಅವರ ಸಮಾಧಿ ಬಳಿ ಟಿಪ್ಪು ಅವರ ಜಯಂತಿ, ಪುಣ್ಯ ಸ್ಮರಣೆ ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಮಗೆ ಇದೇನೂ ಹೊಸದಲ್ಲ. ರಾಜಕೀಯ ಕಾರಣಕ್ಕೆ ಟಿಪ್ಪು ಜಯಂತಿ ಎಂಬ ಸರ್ಕಾರಿ ಕಾರ್ಯಕ್ರಮ ಸೃಷ್ಟಿಯಾಗಿ ಮತ್ತದೇ ಕಾರಣಕ್ಕೆ ನಿಂತುಹೋಗಿದೆ. ನಮಗೆ ಸರ್ಕಾರಿ ಜಯಂತಿ ಬೇಕಿಲ್ಲ ಎಂದರು.

ನಾಯಕರು ಒಪ್ಪಿದರೆ ಎನ್.ಆರ್.ಕ್ಷೇತ್ರದಿಂದಲೇ ಸ್ಪರ್ಧೆ : ಜೆಡಿಎಸ್ ಮುಖಂಡ ಶಾಹೀದ್ ಸ್ಪಷ್ಟನೆ

ಇದೇ ಸಂದರ್ಭದಲ್ಲಿ ಅವರು ಮಾತನಾಡಿ ನರಸಿಂಹರಾಜ ಕ್ಷೇತ್ರದಲ್ಲಿ ತಾವೂ ಕೂಡ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿದ್ದು, ಪಕ್ಷದ ನಾಯಕರು ಅವಕಾಶ ನೀಡಿದರೆ ಖಂಡಿತಾ ಸ್ಪರ್ಧಿಸುವುದಾಗಿ ಹೇಳಿದರು.
ಕ್ಷೇತ್ರದಲ್ಲಿ ಈಗಾಗಲೇ ಪಕ್ಷದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮೆಲ್ಲರ ಬಯಕೆ. ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸುತ್ತಿರುವುದಾಗಿ ಅವರು ಹೇಳಿದರು. ಜೆಡಿಎಸ್ ಮುಖಂಡ ಕಿಂಗ್ ಇಮ್ರಾನ್ ಮತ್ತಿತರರು ಇದ್ದರು.  



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು