ಜನರ ಸಮಸ್ಯೆಗಳಿಗೆ ಸ್ಪಂದಿಸದ ಪುರಸಭೆ, ಎಲ್ಲೆಂದರಲ್ಲಿ ತ್ಯಾಜ್ಯ, ಹಂದಿಗಳ ಕಾಟ, ಗಬ್ಬು ನಾರುವ ಚರಂಡಿಗಳು 
ವರದಿ-ಜ್ಞಾನೇಶ ಮೂರ್ತಿ, ಬಂಗಾರಪೇಟೆ
ಬಂಗಾರಪೇಟೆ : ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರ ಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಹಾಗೂ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸಮರ್ಪಕ ಶೌಚಾಲಯ ನಿರ್ಮಾಣ ಹಾಗೂ ನಗರದ ಕಸ ವಿಲವಾರಿಗೆ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆಗೊಳಿಸಿದ್ದರೂ ಅದೆಲ್ಲಾ ಜಾಹಿರಾತಿಗಷ್ಟೇ ಸೀಮಿತವಾಗಿದ್ದು, ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ಅನುದಾನ ಗುಳುಂ?
ಒಟ್ಟು 27 ವಾರ್ಡ್‍ಗಳಿಂದ 27 ಜನ ಚುನಾಯಿತ ಸದಸ್ಯರು, 5 ನಾಮ ನಿರ್ದೇಶತ ಸದಸ್ಯರನ್ನು ಒಳಗೊಂಡಂತೆ 32 ಸದಸ್ಯರಿದ್ದಾರೆ. ಪ್ರತಿನಿತ್ಯ ಇದೇ ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದರೂ ಸಹ ಇಲ್ಲಿನ ಸಮಸ್ಯೆಗಳ ಬಗ್ಗೆ ಜಾಣ ಕುರುಡರಂತೆ ವರ್ತಿಸುತ್ತಿರುವುದು ಬಂಗಾರಪೇಟೆ ಸಾರ್ವಜನಿಕರ ದೌರ್ಭಾಗ್ಯವಾಗಿದೆ. ತ್ಯಾಜ್ಯ ವಿಲೇವಾರಿಗಾಗಿ ಬಂದ ಅನುದಾನದ ಹಣ ಇಲ್ಲಿ ಕಿಂಚಿತ್ತೂ ಖರ್ಚಾಗಿಲ್ಲ. ಎಲ್ಲಿ ಹೋಯಿತೋ ಕೇಳೋರಿಲ್ಲ.
ಸಾವಿರಾರು ಜನರ ಓಡಾಟದ ಸ್ಥಳವಾದ ನಗರದ ರೈಲ್ವೆ ನಿಲ್ದಾಣ ಹಾಗೂ ಸಾರಿಗೆ ಬಸ್ ನಿಲ್ದಾಣದ ಮಧ್ಯೆ ಇರುವ ಖಾಲಿ ಸ್ಥಳದಲ್ಲಿ ಕಸದ ರಾಶಿಯೇ ತುಂಬಿ ತುಳುಕುತ್ತಿದೆ.
ಎಲ್ಲೆಂದರಲ್ಲಿ ಕಸದ ರಾಶಿ
ಇಲ್ಲಿ ರಾಶಿಗಟ್ಟಲೆ ತೆಂಗಿನ ಚಿಪ್ಪುಗಳನ್ನು ಹಾಗೆಯೇ ಬಿಡಲಾಗಿದೆ. ಇವುಗಳಲ್ಲಿ ಮಳೆ ನೀರು ತುಂಬಿಕೊಂಡು ಕ್ರಿಮಿಕೀಟಗಳು ಮತ್ತು ಸೊಳ್ಳೆಗಳ ವಾಸಸ್ಥಳವಾಗಿದ್ದುಮ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಸಾಕ್ಷಿಯಾಗಿದೆ. ಧರ್ಮರಾಯಸ್ವಾಮಿ ದೇವಸ್ಥಾನದ ಮುಖ್ಯರಸ್ತೆ, ಡೇವಿಡ್ ರಸ್ತೆ, ಬರ್‍ರಸ್ತೆ, ಸರ್ಕಾರಿ ಪ್ರೌಢಶಾಲೆಯ ಉದ್ಯಾನವನದ ಖಾಲಿ ನಿವೇಶನ. ವಿವೇಕಾನಂದ ನಗರ ಹಾಗೂ ಬೋವಿ ನಗರದ ಮುಖ್ಯ ರಸ್ತೆ, ಯಲ್ಲಮ್ಮ ದೇವಸ್ಥಾನ, ಲಕ್ಷ್ಮಿ ದೇವಸ್ಥಾನದ ಪಕ್ಕದ ರಸ್ತೆ. ಅಯ್ಯಪ್ಪ ಸ್ವಾಮಿ ದೇವಸ್ಥಾನ, ಕೆಇಬಿ ಹಿಂಭಾಗ ದಂಡು ರಸ್ತೆ ಒಳಗೊಂಡಂತೆ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ಕಸದ ರಾಶಿ ಬೆಟ್ಟಗಳ ರೂಪದಲ್ಲಿ ಕಾಣಿಸುತ್ತದೆ.
ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪುರಸಭೆ ಮುಂದಾಗುತ್ತಿಲ್ಲ ಎಂಬುದು ದುರಂತವಾಗಿದೆ.
ರಾಜಕಾಲುವೆ ತಡೆಗೋಡೆ ಮಾಯ
ಕಾರಹಳ್ಳಿ ಮುಖ್ಯರಸ್ತೆಯಲ್ಲಿರುವ ಉಪ್ಪು ಗುಡಿಸಲು, ಶಾಂತಿನಗರ ಮತ್ತು ಪಂಪ್ ಹೌಸ್ ಗೆ ಹೊಂದಿಕೊಂಡಿರುವ ರಾಜಕಾಲುವೆಯ ದುಸ್ಥಿತಿಯನ್ನು ನೋಡಲು ಸಾಧ್ಯವಿಲ್ಲ. ರಾಜಕಾಲುವೆಯ ಪಕ್ಕದಲ್ಲಿ ರಾಜಾಜಿ ಶಾಲೆಯಿದ್ದು ನೂರಾರು ಮಕ್ಕಳು ಕಾಲುವೆಯ ಪಕ್ಕದಲ್ಲಿ ಹೋಗಬೇಕಾಗುತ್ತದೆ. ಕಾಲುವೆಗೆ ಹೊಂದಿಕೊಂಡಂತೆ ನೂರಾರು ಮನೆಗಳಿವೆ. ಈ ಕಾಲುವೆಗೆ ಒಂದು ಕಡೆ ತಡೆಗೋಡೆ ಇದ್ದು ಮತ್ತೊಂದು ಕಡೆಯ ಗೋಡೆಯೇ ಮಂಗಮಾಯವಾಗಿದೆ. ಕೆರೆಯಲ್ಲಿ ಹೂಳು ತೆಗೆಯದೆ ಇರುವ ಪರಿಣಾಮ ಮಳೆಯಿಂದ ಹರಿದ ನೀರು ಕಾಲುವೆಯಲ್ಲಿಯೇ ನಿಂತಿದೆ, ಕಾಲುವೆಯ ಪಕ್ಕದಲ್ಲಿರುವ ನಿವಾಸಿಗಳು ತಮ್ಮ ಶೌಚಾಲಯಗಳಿಗೆ ಪಿಟ್ಟುಗಳನ್ನು ಅಳವಡಿಸದೆ ನೇರವಾಗಿ ರಾಜಕಾಲುವೆಗೆ ಹರಿಯ ಬಿಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರು, ವಯೋವೃದ್ಧರು, ವಿದ್ಯಾರ್ಥಿಗಳು, ಇದೇ ರಸ್ತೆಯಲ್ಲಿ ಓಡಾಡ ಬೇಕಾಗಿರುವುದರಿಂದ ಕಾಲುವೆಯಲ್ಲಿ ಬಿದ್ದರೆ ಯಾರು ಹೊಣೆ?
ಸಾರ್ವಜನಕರ ದುರ್ವರ್ತನೆ
ಈ ಕಾಲುವೆಯಲ್ಲಿ ಸಾರ್ವಜನಿಕರು ಸಹ ಪ್ಲಾಸ್ಟಿಕ್ ಬಾಟಲ್, ಕವರ್, ಕಸದ ರಾಶಿಯನ್ನು ಎಗ್ಗಿಲ್ಲದೆ ಹಾಕುತ್ತಿದ್ದಾರೆ. ಇದನ್ನು ತೆರವುಗೊಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ರಾಜ ಕಾಲುವೆಯ ಕಲುಷಿತ ನೀರು ಕೆರೆಗೆ ಹೋಗಿ ಪಂಪ್ ಹೌಸಿನಲ್ಲಿ ಶುದ್ದೀಕರಣವಾಗಿ ನಗರವಾಸಿಗಳಿಗೆ ಕುಡಿಯಲು ಬಿಡುತ್ತಿದ್ದಾರೆ.
ಕಾರಲ್ಲಿ ಮುಖ್ಯ ರಸ್ತೆಯಲ್ಲಿ ಕೊಳವೆ ಬಾವಿಗೆ ಹಾಕಲಾಗಿದ್ದ ಮೋಟರನ್ನು ತೆರವುಗೊಳಿಸಲಾಗಿದೆ ಆದರೆ ಮೋಟರ್ ಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಗಳನ್ನು ಹಾಗೆಯೇ ನೆಲದ ಮೇಲೆ ಹಲವು ತಿಂಗಳಿಂದ ಬಿಟ್ಟಿದ್ದಾರೆ, ಯಾರಿಗಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಪುರಸಭೆಯ ಕಾರ್ಮಿಕರೇನೋ ಅತ್ಯಂತ ಕ್ರಿಯಾಶೀಲರಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸವನ್ನು ಮುಂದುವರಿಸಿದ್ದಾರೆ. ಆದರೆ, ಪೌರಕಾರ್ಮಿಕರಿಗೆ ಅಗತ್ಯವಾಗಿ ಬೇಕಾದ ಮೂಲ ಸೌಕರ್ಯಗಳನ್ನು ಪುರಸಭೆ ಒದಗಿಸಲು ವಿಫಲವಾಗಿದೆ.
ದಿನಕಳೆದಂತೆ ಪಟ್ಟಣ ಬೃಹದಾಕಾರವಾಗಿ ಬೆಳೆಯುತ್ತಿದೆ. ಆದರೆ ಕಾರ್ಮಿಕರ ಕೊರತೆಯನ್ನು ನೀಗಿಸುವಲ್ಲಿ ಪುರಸಭೆ ದಿವ್ಯ ಮೌನವನ್ನು ಅನುಸರಿಸುತ್ತಿದೆ.
ಹೆಸರಿಗಷ್ಠೆ ಛಲಪತಿ
ಪುರಸಭೆಯ ಮುಖ್ಯಾಧಿಕಾರಿ ಜಿ.ಎನ್.ಚಲಪತಿ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಪ್ರಾಮಾಣಿಕತೆಯ ವಿಷಯದಲ್ಲಿ ನಾಗರಹಾವಿನಂತೆ ಬಸುಗುಟ್ಟಿದರು. ಸಾರ್ವಜನಿಕರಿಗೆ ಅಭಿವೃದ್ಧಿಯ ಭರವಸೆಯನ್ನು ತುಂಬಿದ್ದರು ಆದರೆ ದಿನಗಳಂತೆ ಇತರ ಅಧಿಕಾರಿಗಳ ಹಾಗೆ ಎಸಿ ರೂಮ್ ಹಾಗೂ ಕಾರಿಗೆ ಸೀಮಿತವಾದವರಂತೆ ಕಾಣುತ್ತಿದ್ದಾರೆ.
ಕರೋನಾ ಎಂಬ ಹೆಮ್ಮಾರಿಯಿಂದ ಭಯದಲ್ಲಿ ಬದುಕು ಸಾಗಿಸಿದ ಜನರು ಇತ್ತೀಚಿಗೆ ಮನೆ ಬಿಟ್ಟು ಹೊರ ಬರುತ್ತಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷತನದಿಂದ ಡೆಂಗ್ಯೂ, ಚಿಕನ್ ಗುನ್ಯಾ, ಟೈಫಾಯ್ಡ್, ಮಲೇರಿಯ, ಮೊದಲಾದ ಸಾಂಕ್ರಮಿಕ ರೋಗ ಹರಡಬಹುದು ಎಂಬ ಭಯಭೀತಿಯಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಾರ್ಯವೈಖರಿ ಏನೆಂದು ನೋಡಬೇಕಾದರೆ ನೀವೊಮ್ಮೆ ಬಂಗಾರಪೇಟೆಗೆ ಬನ್ನಿ
0 ಕಾಮೆಂಟ್‌ಗಳು